Live Stream

[ytplayer id=’22727′]

| Latest Version 8.0.1 |

Politics News

ಮಹದೇವಪ್ಪ ಹೇಳಿಕೆ ಅಕ್ಷಮ್ಯ ಅಪರಾಧ: ವಿಜಯೇಂದ್ರ

ಮಹದೇವಪ್ಪ ಹೇಳಿಕೆ ಅಕ್ಷಮ್ಯ ಅಪರಾಧ: ವಿಜಯೇಂದ್ರ

ಬೆಂಗಳೂರು: ಮೈಸೂರಿನ ಇತಿಹಾಸ ತಿಳಿದಿದ್ದರೂ ಹಿರಿಯ ಸಚಿವ ಎಚ್.ಸಿ.ಮಹದೇವಪ್ಪ ಅವರು ನಿನ್ನೆ ನೀಡಿದ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಖಂಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಟಿಪ್ಪು ಸುಲ್ತಾನ್ ಅವರು ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ಅಡಿಗಲ್ಲನ್ನು ಹಾಕಿದವರು ಎಂದು ಎಚ್.ಸಿ.ಮಹದೇವಪ್ಪ ಅವರು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ, ಮಹದೇವಪ್ಪ ಅಥವಾ ಕಾಂಗ್ರೆಸ್ಸಿನವರಿಗೆ ಮೈಸೂರಿನ ಮಹಾರಾಜರಿಗೆ ಅಪಮಾನ ಮಾಡುವುದರಲ್ಲಿ ಅವರಿಗೆ ಅದೇನು ತೃಪ್ತಿ ಸಿಗುತ್ತದೋ, ಸಂತೋಷ ನೀಡುತ್ತದೋ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ಸಿನವರು ಅನೇಕ ಸಂದರ್ಭದಲ್ಲಿ ಕೃಷ್ಣರಾಜ ಒಡೆಯರ್, ಮಹಾರಾಜರಿಗೆ ಅವಮಾನ ಮಾಡುವುದನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಟೀಕಿಸಿದರು.
ಟಿಪ್ಪು ಸುಲ್ತಾನ್ 1799ರಲ್ಲೇ ಯುದ್ಧದಲ್ಲಿ ಸೋತ ಮೇಲೆ ಪ್ರಾಣ ಕಳಕೊಂಡಿದ್ದರು. 1902ರ ನಂತರದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಲು ಚಿಂತನೆ ಆರಂಭವಾಗಿತ್ತು. 1910ರಲ್ಲಿ ಮದ್ರಾಸ್ ಸರಕಾರ ಇತ್ತು. ಆಗ ಮಹಾರಾಜರು ಪ್ರಯತ್ನ ಮಾಡಿದಾಗ ಅವರಿಗೆ ಅವಮಾನ ಆಗಿತ್ತು. 1911-12ರಲ್ಲಿ ಅಂದಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಹೋರ್ಡಿಂಗ್ ಅನುಮತಿ ನೀಡಿದ್ದರು. 1931ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣಗೊಂಡಿತ್ತು ಎಂದು ವಿವರ ನೀಡಿದರು.
ಇಷ್ಟೆಲ್ಲ ಗೊತ್ತಿದ್ದರೂ ಮೈಸೂರು ಭಾಗದವರಾದ ಎಚ್.ಸಿ.ಮಹದೇವಪ್ಪ ಅವರು ಇತಿಹಾಸವನ್ನು ತಿರುಚುವ ಕೆಲಸವನ್ನು ಯಾಕೆ ಮಾಡುತ್ತಿದ್ದಾರೆ? ಯಾಕೆ ಪದೇಪದೇ ಮಹಾರಾಜರ ಮನೆತನಕ್ಕೆ ಅಪಮಾನ ಮಾಡುವುದನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ? ಈಚೆಗೆ ಪುಣ್ಯಾತ್ಮ, ಎಂಎಲ್‍ಸಿ ಯತೀಂದ್ರ ಅವರೂ ಹೇಳಿಕೆ ಕೊಟ್ಟಿದ್ದರು. ಸಿದ್ದರಾಮಯ್ಯನವರು ಮೈಸೂರು ರಾಜರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆಂದು ತಿಳಿಸಿದ್ದರು. ಈ ರೀತಿ ಸಿದ್ದರಾಮಯ್ಯ, ಯತೀಂದ್ರ, ಎಚ್.ಸಿ.ಮಹದೇವಪ್ಪ ಅವರು ಅಪಮಾನ ಮಾಡುವುದು ಸರಿಯಲ್ಲ. ಕೃಷ್ಣರಾಜ ಸಾಗರ ಅಣೆಕಟ್ಟು ಆಗಬೇಕಾದರೆ, ಅಂದಿನ ಮಹಾರಾಜರ ತಾಯಿಯವರು ಮುಂಬೈಗೆ ತೆರಳಿ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಅಣೆಕಟ್ಟು ಕಟ್ಟಲು ಅನುಕೂಲ ಮಾಡಿಕೊಟ್ಟಿದ್ದರು ಎಂಬುದು ಇತಿಹಾಸ. ಇವೆಲ್ಲವೂ ತಿಳಿದಿದ್ದರೂ ಎಚ್.ಸಿ.ಮಹದೇವಪ್ಪ ಅವರು ಹೀಗೆ ಮಾತನಾಡಿದ್ದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಎಲ್ಲದರಲ್ಲೂ ಮುಸಲ್ಮಾನರ ಓಲೈಕೆಯೇ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಯಾದವಾಡ ಎಂಬಲ್ಲಿ ನೀರಿನ ಟ್ಯಾಂಕಿಗೆ ಕೆಲವರು ವಿಷ ಬೆರೆಸಲು ಹೋಗಿದ್ದರು. ಅಲ್ಲಿ ಮುಸಲ್ಮಾನ ಮುಖ್ಯೋಪಾಧ್ಯಾಯರಿದ್ದರು. ಅವರನ್ನು ಹೊರಕ್ಕೆ ಹಾಕಲು ವಿಷ ಬೆರೆಸಲಾಗಿದೆ ಎಂದು ಸಿದ್ದರಾಮಯ್ಯನವರು ತನಿಖೆಗೂ ಮೊದಲೇ ಹೇಳಿಕೆ ಕೊಟ್ಟಿದ್ದಾರೆ. ಎಲ್ಲಿ ಮುಸಲ್ಮಾನರಿದ್ದಾರೋ ಅಲ್ಲಿ ಇವರಿಗೆ ಬಹಳ ಕಾಳಜಿ ಎಂದು ಟೀಕಿಸಿದರು. ಪೊಲೀಸ್ ತನಿಖೆ ನಡೆಯಲಿ; ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದರಲ್ಲದೆ, ಮಹದೇವಪ್ಪನವರಿಗೆ ಮುಸ್ಲಿಮರ ಪ್ರೀತಿ ಸಿದ್ದರಾಮಯ್ಯನವರ ಬಳುವಳಿ ಇದ್ದಂತಿದೆ ಎಂದು ತಿಳಿಸಿದರು.

ರಾಹುಲ್ ನಾಟಕ ಮಾಡಬೇಕಿರಲಿಲ್ಲ…
ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದು ಇಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡುತ್ತಾರೋ ಪ್ರತಿಭಟನೆ ನಡೆಸುತ್ತಾರೋ, ಅದನ್ನು ಅವರ ಪಾಡಿಗೆ ಮಾಡಲಿ. ಲೋಕಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಕರ್ನಾಟಕಕ್ಕೆ ಬಂದು ಈ ರೀತಿ ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು. ಚುನಾವಣಾ ಸತತ ಸೋಲುಗಳಿಂದ ರಾಹುಲ್ ಗಾಂಧಿಯವರು ಹತಾಶರಾಗಿದ್ದಾರೋ ನರೇಂದ್ರ ಮೋದಿ ಜೀ ಅವರು ಪ್ರಧಾನಿ ಸ್ಥಾನದಲ್ಲಿ ಇಷ್ಟು ಗಟ್ಟಿಯಾಗಿ ಮುಂದುವರೆಯುತ್ತಿದ್ದಾರೆ; ಅದನ್ನು ಸಹಿಸಲು ಸಾಧ್ಯ ಆಗುತ್ತಿಲ್ಲವೋ? ಒಟ್ಟಾರೆಯಾಗಿ ಅವರ ನಡವಳಿಕೆಗಳೇ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯ ಸತ್ಯ ಈಗಾಗಲೇ ಬಹಿರಂಗವಾಗಿದೆ.

ಸುಮಾರು 35 ಲಕ್ಷ ಮತದಾರರು ಬೇರೆ ರಾಜ್ಯಕ್ಕೆ ವಲಸೆ ಹೋಗಿದ್ದಾರೆ. 8-9 ಲಕ್ಷ ಮತದಾರರು ಮೃತಪಟ್ಟಿದ್ದು, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿವೆ. ಹೀಗೆ ಅನೇಕ ಗೊಂದಲಗಳಿದ್ದಾಗ ಪರಿಷ್ಕರಣೆ ಅನಿವಾರ್ಯ. ಮತದಾರರ ಪಟ್ಟಿ ಪರಿಷ್ಕರಣೆ ಹೊಸದೇನೂ ಅಲ್ಲ; ಬಿಹಾರದಲ್ಲಿ ಸೋಲಿನ ಸುಳಿವು ಈಗಾಗಲೇ ಸಿಕ್ಕಿರಬೇಕು. ಆ ಕಾರಣಕ್ಕಾಗಿ ರಾಹುಲ್ ಹತಾಶರಾಗಿ ಮಾತನಾಡುತ್ತಾರೆ ಎಂದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮವಾಗಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಇದು ಮತದಾರರಿಗೆ ಮಾಡುವ ಅವಮಾನ ಎಂದು ಟೀಕಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಪಕ್ಷದ ಪ್ರಮುಖರು ಇದ್ದರು.

VK DIGITAL NEWS:

 

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";