ದಿನಾಂಕ:26/08/2025 ಮತ್ತು 27/08/2025 ರಂದು ಗೌರಿ ಗಣೇಶೋತ್ಸವದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬೆಂಗಳೂರು ನಗರದ ಪೊಲೀಸ್ ಮತ್ತು ಬಿ.ಬಿ.ಎಂ.ಪಿ ಇಲಾಖೆಯ ಜಂಟಿ ಸಹಯೋಗದಲ್ಲಿ ದಿನಾಂಕ:02/08/2025 ರಂದು ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್‍ಹಾಲ್) ನಲ್ಲಿ ಶಾಂತಿ ಸೌಹಾರ್ದತೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಗೆ ಬಿ.ಬಿ.ಎಂ.ಪಿ ಯ ಮುಖ್ಯ ಆಯುಕ್ತರಾದ ಶ್ರೀ. ಮಹೇಶ್ವರ್‍ರಾವ್, ಐ.ಎ.ಎಸ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ.ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್ ಭಾಗವಹಿಸಿದ್ದರು.
ಸಭೆಯಲ್ಲಿ ಸಾರ್ವಜನಿಕರು, ಸರ್ವಧರ್ಮದ ಮುಖ್ಯಸ್ಥರು ಮತ್ತು ಸಿಟಿಜನ್ ಕಮಿಟಿಯ ಸದಸ್ಯರುಗಳು ಹಲವಾರು ಸಲಹಾ ಸೂಚನೆಗಳನ್ನು ವ್ಯಕ್ತಪಡಿಸಿರುತ್ತಾರೆ. ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಅನುಮತಿ ಪತ್ರವನ್ನು ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿ.ಬಿ.ಎಂ.ಪಿ ಪಾಲಿಕೆಯ ವತಿಯಿಂದ 75 ಉಪ ವಿಭಾಗದ ಕಛೇರಿಗಳಲ್ಲಿ ಏಕಗವಾಕ್ಷಿ ಪದ್ದತಿಯಲ್ಲಿ, ಒಂದೇ ಸೂರಿನಡಿ ಬಿ.ಬಿ.ಎಂ.ಪಿ, ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆಂದು ಬಿ.ಬಿ.ಎಂ.ಪಿ ಆಯುಕ್ತರು ತಿಳಿಸಿರುತ್ತಾರೆ. ಈ ಏಕಗವಾಕ್ಷಿ ಕೇಂದ್ರಗಳ ವಿಳಾಸ ಹಾಗೂ ನೋಡಲ್ ಅಧಿಕಾರಿ ಮಾಹಿತಿಯನ್ನು ಶೀಘ್ರವೇ ವೆಬ್‍ಸೈಟ್ ಮೂಲಕ ಬಿಡುಗಡೆ ಮಾಡಲಾಗುವುದು.
ಗಣೇಶ ಮೂರ್ತಿಯ ವಿಸರ್ಜನೆಗೆ ಪ್ರಮುಖ ಕೆರೆಗಳ ಕಲ್ಯಾಣಿಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡು ವಿಸರ್ಜನೆಗೆ ಅನುವು ಮಾಡಿಕೊಡಲಾಗುವುದು. ಅವಶ್ಯಕತೆ ಇರುವ ಕಡೆ ವಾರ್ಡ್‍ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್)ಗಳನ್ನು ವ್ಯವಸ್ಥೆ ಮಾಡಲಾಗುವುದು.
ಬೆಂಗಳೂರು ನಗರದ ಪೊಲೀಸ್ ಆಯುಕ್ತರು, ಹಬ್ಬಗಳನ್ನು ಆಚರಿಸುವ ಕುರಿತು ಸಾರ್ವಜನಿಕರು ಉತ್ತಮ ಸಲಹೆಗಳನ್ನು ನೀಡಿದ್ದು, ಆ ಸಲಹೆಗಳಿಗೆ ಅಗತ್ಯ ಕ್ರಮ ಕೈಗೊಂಡು, ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ತಿಳಿಸಿದರು. ಅಲ್ಲದೆ ಹಬ್ಬ ಆಚರಿಸುವ ವೇಳೆ ಬಿ.ಬಿ.ಎಂ.ಪಿ, ಪೊಲೀಸ್ ಇಲಾಖೆಯಿಂದ ಬರುವ ಸಲಹೆ, ಸೂಚನೆಗಳನ್ನು ಹಾಗೂ ಮೆರವಣಿಗೆಯ ಮಾರ್ಗಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಸೂಚಿಸಿದರು.
ಗೌರಿ-ಗಣೇಶ ಹಾಗೂ ಈದ್‍ಮಿಲಾದ್ ಹಬ್ಬಗಳ ವೇಳೆ ಶಾಂತಿ ಕಾಪಾಡಬೇಕೆಂದು ನಾಗರೀಕರಿಗೆ ತಿಳಿಸಲಾಯಿತು. ಯಾವುದೇ ಸಮಸ್ಯೆಯನ್ನು ಸ್ಥಳೀಯವಾಗಿ ಬಗೆಹರಿಸಿಕೊಂಡು ಹಬ್ಬಗಳನ್ನು ಆಚರಿಸಲು ಸೂಚಿಸಲಾಯಿತು.
ಮುಂಬರುವ ಗೌರಿ-ಗಣೇಶ ಹಬ್ಬವನ್ನು ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ದಕ್ಕೆಯಾಗದಂತೆ, ಸಂಭ್ರಮದಿಂದ, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸೋಣವೆಂದು ತಿಳಿಸಿದರು.
ಸಭೆಯಲ್ಲಿ ಬಿ.ಬಿ.ಎಂ.ಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರುಗಳಾದ ಪೂರ್ವ, ಪಶ್ಚಿಮ, ಅಪರಾಧ ಹಾಗೂ ಸಂಚಾರ, ಬೆಸ್ಕಾಂ, ಕೆ.ಎಸ್.ಪಿ.ಸಿ.ಬಿ, ಅಗ್ನಿಶಾಮಕ ಮತ್ತು ಗಣೇಶ ಪ್ರತಿಷ್ಠಾಪನದ ಆಯೋಜಕರು ಹಾಗೂ ವಿವಿಧ ಸಮುದಾಯದ ಮುಖಂಡರು ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು.
ADVERTISEMENT