ಬೆಂಗಳೂರು: ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ (Yellow Line) ಇದೀಗ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ಪ್ರಮಾಣೀಕರಣ ಪಡೆದಿದ್ದು, ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಈ ISA ಪ್ರಮಾಣಪತ್ರವನ್ನು ಇಟಲಿಯ ಸರ್ಕಾರಿ ಸ್ವಾಮ್ಯದ ಇಟಾಲ್ಸರ್ಟಿಫರ್ ಕಂಪನಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗೆ ಸಲ್ಲಿಸಿದೆ. ಹಳದಿ ಮಾರ್ಗದ ಸಿಗ್ನಲಿಂಗ್ ಗುತ್ತಿಗೆದಾರ ಸೀಮೆನ್ಸ್ ಇಂಡಿಯಾ ಲಿಮಿಟೆಡ್–ಸೀಮೆನ್ಸ್ ಎಜಿ ಸಹಯೋಗದೊಂದಿಗೆ ಈ ಪ್ರಮಾಣೀಕರಣ ಕಾರ್ಯ ಪೂರ್ಣಗೊಂಡಿದೆ.
ಹಳೆಯ ತಾಂತ್ರಿಕ ದೋಷಗಳಿಂದಾಗಿ ಈ ಪ್ರಮಾಣೀಕರಣ ವಿಳಂಬವಾಗಿದ್ದರೂ, ಇದೀಗ ತಂತ್ರಾಂಶ ನವೀಕರಣದೊಂದಿಗೆ ಎಲ್ಲಾ ತೊಂದರೆಗಳನ್ನು ಸರಿಪಡಿಸಲಾಗಿದೆ. ISA ಪ್ರಮಾಣಪತ್ರದ ನಂತರ, ವರದಿಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಗೆ (CMRS) ಸಲ್ಲಿಸಲಾಗುವುದು ಎಂದು BMRCL ಪಿಆರ್ ಅಧಿಕಾರಿ ಯಶವಂತ್ ಚವಾಣ್ ತಿಳಿಸಿದ್ದಾರೆ.
BMRCL ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರು ಈ ಮೊದಲು ಹೇಳಿದಂತೆ, ಆಗಸ್ಟ್ 15ರೊಳಗೆ ಹಳದಿ ಮಾರ್ಗ ಆರಂಭವಾಗುವ ನಿರೀಕ್ಷೆ ಇದೆ.
ಹಳದಿ ಮಾರ್ಗದ ವಿವರಗಳು:
RV ರಸ್ತೆ – ಬೊಮ್ಮಸಂದ್ರ ನಡುವಿನ ಈ 18.8 ಕಿ.ಮೀ ಉದ್ದದ ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು ಇರುವುದರ ಜೊತೆಗೆ, ಗ್ರೀನ್‌ಲೈನ್ ಜತೆ ಸಂಪರ್ಕ ಹೊಂದಿರುವುದರಿಂದ ದಕ್ಷಿಣ ಬೆಂಗಳೂರು ಪ್ರದೇಶದ ನಾಗರಿಕರಿಗೆ ನಗರದ ಕೇಂದ್ರ ಭಾಗಗಳಿಗೆ ಸುಲಭ ಪ್ರವೇಶ ಲಭ್ಯವಾಗಲಿದೆ.