ತುಮಕೂರು: ರೇಷ್ಮೆ ಕೃಷಿಯು ಹೆಚ್ಚು ಲಾಭ ತರುವ ಕೃಷಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ರೇಷ್ಮೆ ಇಲಾಖೆ ಸಹಯೋಗದಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರೇಷ್ಮೆ ಬೆಳೆಗಾರರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ರೇಷ್ಮೆ ಉದ್ಯಮ 200 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಹಿಪ್ಪುನೇರಳೆಯನ್ನು ಅವಲಂಬಿಸಿ ರೇಷ್ಮೆ ಕೃಷಿ ಮಾಡುವ ಪದ್ಧತಿ ದೇಶದ ಯಾವುದೇ ಭಾಗದಲ್ಲಿ ಕಾಣ ಸಿಗುವುದಿಲ್ಲ. ಕರ್ನಾಟಕದಲ್ಲಿ ಉತ್ಪಾದಿಸುವ ಮೈಸೂರು ರೇಷ್ಮೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಹೆಣ್ಣಿನ ಅಂದ ಹೆಚ್ಚಿಸುವ ಮೈಸೂರು ರೇಷ್ಮೆಯಂತಹ ಗುಣಮಟ್ಟಕ್ಕೆ ಯಾವುದೇ ರೇಷ್ಮೆ ಸರಿಸಾಟಿಯಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿನ ಕೃಷಿಕರು ರೇಷ್ಮೆ ಉದ್ಯಮವನ್ನು ಅವಲಂಬಿಸಿದ್ದಾರೆ. ಪ್ರಾರಂಭದಲ್ಲಿ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿದ್ದ ರೇಷ್ಮೆ ಉದ್ಯಮ ಪ್ರಸ್ತುತ ರಾಜ್ಯದಾದ್ಯಂತ ಹಬ್ಬುತ್ತಿದೆ. ರಾಮನಗರ ಜಿಲ್ಲೆಯು ಏಷ್ಯಾದಲ್ಲಿಯೇ ಬೃಹತ್ ರೇಷ್ಮೆ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದ್ದು, ಪ್ರತೀ ದಿನ 2ಕೋಟಿ ರೂ.ಗಳ ವಹಿವಾಟು ನಡೆಯುತ್ತದೆ ಎಂದು ತಿಳಿಸಿದರಲ್ಲದೆ, ವರ್ಷಕ್ಕೆ 6 ಬೆಳೆ ಬೆಳೆಯಬಹುದಾದ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡರೆ ರೈತರು ಸಂಕಷ್ಟದಿಂದ ಹೊರಬರಬಹುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದಲ್ಲಿ ತಾವು ನಿರ್ವಹಿಸಿದ ರೇಷ್ಮೆ ಖಾತೆಗೆ ಮೊದಲ ಖಾತೆ ಎಂದು ಸ್ಮರಿಸಿದ ಸಚಿವರು, ತಾವು ರೇಷ್ಮೆ ಖಾತೆ ಸಚಿವನಾಗಿದ್ದಾಗ ರೇಷ್ಮೆ ಉದ್ಯಮವನ್ನು ವಿಸ್ತರಿಸಲು ವಿಶ್ವ ಬ್ಯಾಂಕಿನಿಂದ ಆರ್ಥಿಕ ನೆರವು ನೀಡಲಾಗುತ್ತಿತ್ತು. ಇದರಿಂದ ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಯನ್ನು ಅಳವಡಿಸಿಕೊಂಡವರ ಸಂಖ್ಯೆ ಹೆಚ್ಚಾಯಿತು ಎಂದು ತಿಳಿಸಿದರು.
ರಾಗಿ, ಜೋಳ ಮತ್ತಿತರ ಆಹಾರ ಧಾನ್ಯ ಬೆಳೆಯುವ ರೈತರು ಮಾರಾಟ ಮಾಡಲು 6 ತಿಂಗಳುಗಳ ಕಾಲ ಕಾಯಬೇಕು. ಆದರೆ ರೇಷ್ಮೆ ಗೂಡನ್ನು ಉತ್ಪಾದಿಸುವ ರೈತರು ಮಾರಾಟ ಮಾಡಿದ ಕೂಡಲೇ ಆನ್‍ಲೈನ್ ಮೂಲಕ ಅವರ ಖಾತೆಗೆ ಹಣ ಜಮೆಯಾಗಲಿದೆ. ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಸರ್ಕಾರ ವಿನೂತನ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2000 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ಭವಿಷ್ಯದಲ್ಲಿ ಈ ಪ್ರದೇಶವನ್ನು 10,000 ಹೆಕ್ಟೇರಿಗೆ ವಿಸ್ತರಿಸುವತ್ತ ರೈತರು ಗಮನಹರಿಸಬೇಕು ಎಂದರು.
ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಮಾತನಾಡುತ್ತಾ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಉನ್ನತ ಮಟ್ಟಕೇರಿಸಲು ಶ್ರಮಿಸಬೇಕು. ರೇಷ್ಮೆ ಉದ್ಯಮವು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಹೊಂದಿರುವ ಉದ್ಯಮವಾಗಿದೆ. ರೇಷ್ಮೆ ಕೃಷಿಯು ಭವಿಷ್ಯದ ಪ್ರಮುಖ ಬೆಳೆಯಾಗಿದ್ದು, ರೈತರು ಇದನ್ನು ವೈಜ್ಞಾನಿಕವಾಗಿ ಬೆಳೆಸಲು ಮುಂದಾಗಬೇಕು. ಹೆಚ್ಚಿನ ರೈತರು ಈ ಕ್ಷೇತ್ರವನ್ನು ಆಶ್ರಯಿಸುವ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ವೀರನಾಯಕನಹಳ್ಳಿಯ ಸೋಮಶೇಖರ್, ಶಿರಾ ತಾಲ್ಲೂಕು ಹೊನ್ನಗೊಂಡನಹಳ್ಳಿಯ ನರಸಿಂಹಯ್ಯ, ಕೊರಟಗೆರೆ ತಾಲ್ಲೂಕು ತಿಮ್ಮನಹಳ್ಳಿಯ ಪಾರ್ವತಮ್ಮ ಅವರಿಗೆ ರೇಷ್ಮೆ ಕೃಷಿ ಸವಲತ್ತುಗಳನ್ನು ವಿತರಿಸಲಾಯಿತು.
ತಿಪಟೂರು ಶಾಸಕ ಷಡಾಕ್ಷರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ Police ವರಿಷ್ಟ ಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ರೇಷ್ಮೆ ಅಪರ ನಿರ್ದೇಶಕ ವೈ.ಟಿ. ತಿಮ್ಮಯ್ಯ, ರೇಷ್ಮೆ ಜಂಟಿ ನಿರ್ದೇಶಕರಾದ ಕೆ.ಎನ್. ರವಿ ಹಾಗೂ ರಾಚಪ್ಪ, ರೇಷ್ಮೆ ಉಪನಿರ್ದೇಶಕ ಟಿ. ಲಕ್ಷ್ಮಿನರಸಯ್ಯ ಸೇರಿದಂತೆ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.