ಬೆಂಗಳೂರು ನಗರ ಜಿಲ್ಲೆ, ಜುಲೈ 14, (ಕರ್ನಾಟಕ ವಾರ್ತೆ): ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಗಸ್ಟ್ 15 ರಂದು ನಡೆಯುವ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆದ್ದೂರಿಯಾಗಿ ಆಚರಿಸಲು ಎಲ್ಲರೂ ತಮಗೆ ವಹಿಸಿದ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಲು ಪ್ರಾರಂಭಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ 2025ರ ಸಮಾರಂಭದ ಪೂರ್ವಭಾವಿ ಸಿದ್ಧತೆಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈದಾನದ ಸ್ವಚ್ಛತೆ, ಆಸನಗಳು, ಶೌಚಾಲಯ, ವೇದಿಕೆ ಅಲಂಕಾರ, ಧ್ವನಿ ವರ್ಧಕಗಳು ಮತ್ತು ಶಾಮಿಯಾನಗಳ ಸಮರ್ಪಕ ವ್ಯವಸ್ಥೆಯನ್ನು ಮಾಡಬೇಕೆಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು ಕಾರ್ಯಕ್ರಮದಲ್ಲಿ ಮೈದಾನದ ಸುತ್ತ ವಿದ್ಯುತ್ ಸರಬರಾಜು, ಪ್ರಥಮ ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಜತೆಗೆ ಅಗತ್ಯ ಔಷಧಿ ಹಾಗೂ ಸ್ಟಾಫ್ ನರ್ಸ್ ಸಿಬ್ಬಂದಿಯನ್ನು ನಿಯೋಜಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮಪರ್ಕವಾಗಿ ಒದಗಿಸಬೇಕೆಂದರು. ಸಂಬಂಧಿಸಿದ ಇಲಾಖೆಗಳು ಯಾವುದೇ ಲೋಪ ಬಾರದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಕಟ್ಟುನಿಟ್ಟಿನ ಬಿಗಿ ಭದ್ರತೆಗೆ ಸೂಚನೆ: ಕಾರ್ಯಕ್ರಮಕ್ಕೆ ಪ್ರವೇಶ, ವಾಹನ ನಿಲುಗಡೆ, ಅಗ್ನಿ ಶಾಮಕ ವ್ಯವಸ್ಥೆ ಹಾಗೂ ಮೈದಾನದ ಸುತ್ತ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಪ್ರಥಮಾದ್ಯತೆ ನೀಡುವದರ ಜೊತೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಕೇವಲ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರವೇಶ ಪತ್ರವನ್ನು ವಿತರಿಸಬೇಕು ಮತ್ತು ಮಾಧ್ಯಮ ಗ್ಯಾಲರಿಯಲ್ಲಿ ಮಾಧ್ಯಮ ಪ್ರವೇಶ ಪತ್ರ ಪಡೆದ ಮಾಧ್ಯಮ ಪ್ರತಿನಿಧಿಗಳು ಮಾತ್ರ ಆಸೀನರಾಗುವಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿ ಸಹಕರಿಸಬೇಕು ಎಂದು ಸೂಚಿಸಿದರು.
ನಾಡಗೀತೆ, ರೈತ ಗೀತೆ ಹಾಡುವ ಕಲಾವಿದರ ತಂಡಗಳನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು ಉತ್ತಮ ಗುಣಮಟ್ಟದ ವಿಕ್ಷಕ ವಿವರಣೆಗೆ ಸೂಕ್ತ ನಿರೂಪಕರನ್ನು ಆಯ್ಕೆ ಮಾಡುವಂತೆ ತಿಳಿಸಿದರು. ಶಾಲಾ ಮಕ್ಕಳಿಂದ 10 ನಿಮಿಷಗಳ ಕುರಿತು ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಕಾರ್ಯಕ್ರಮ ಆಯೋಜಿಸುವಾಗ ಕಟ್ಟುನಿಟ್ಟಾಗಿ ಶಿಷ್ಟಾಚಾರ ಪಾಲಿಸಬೇಕು. ಯಾವುದೇ ಕಾರಣಕ್ಕೂ ಶಿಷ್ಟಾಚಾರದಲ್ಲಿ ಆಭಾಸ ಉಂಟಾಗುಬಾರದು ಎಂದು ಅವರು ಆಹ್ವಾನ ಪತ್ರಿಕೆಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಷಾರ ವಿಭಾಗದಿಂದ ಅನುಮೋದನೆ ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸೇವೆಗಳನ್ನು ‘ಸಕಾಲ’ಅಡಿಯಲ್ಲಿ ವಿಳಂಬ ಮಾಡದೇ ವಿಲೆ ಮಾಡುವಂತೆ ಎಲ್ಲ ಇಲಾಖಾ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಯತೀಶ್ ಆರ್. ಬೆಂಗಳೂರು ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಕ್ಷಾಮ ಮಿಶ್ರಾ, ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಜಗದೀಶ ಕೆ. ನಾಯಕ್, ಬೆಂಗಳೂರು ಜಲಮಂಡಳಿಯ ಅಪರ ಮುಖ್ಯ ಅಭಿಯಂತರರು ವಾಗೀಶ್ ಎಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಚಂದ್ರಶೇಖರ್, ಅಗ್ನಿಶಾಮಕದ ಜಿಲ್ಲಾ ಅಧಿಕಾರಿಗಳಾದ ಸಂತೋಷ್ .ಹೆಚ್. ಎಸ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





















