ರಾಜ್ಯ ಚುನಾವಣಾ ಆಯೋಗವು ಸಂವಿಧಾನ ಪರಿಚ್ಛೇದ 243-ಜೆಡ್.ಎ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಪೌರ ಸಭೆಗಳಗ ಅಧಿನಿಯ 1964 ಪ್ರಕರಣ 17 ಮತ್ತು 19ರ ಅನ್ವಯ ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರ್‍ಗಳ ಚುನಾವಣೆ) ನಿಯಮಗಳು, 1977ನಿಯಮ 3(1)ಅನ್ವಯ ಕೋಲಾರದ ವೇಮಗಲ್ ಕುರುಗಲ್, ಚಿಕ್ಕಮಗಳೂರಿನ ಅಜ್ಜಂಪುರ, ದಕ್ಷಿಣ ಕನ್ನಡದ ಕಡಬ, ಹಾವೇರಿಯ ರಟ್ಟಿಹಳ್ಳಿ ಹಾಗೂ ಕಲಬುರಗಿಯ ಕಾಳಗಿ 05 ಪಟ್ಟಣ ಪಂಚಾಯತಿಗಳಿಗೆ ಸಾರ್ವತ್ರಿಕ ಚುಣಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಬೆಳಗಾವಿಯ ಉಗಾರಖುರ್ದ ಪುರಸಭೆ ವಾರ್ಡ್ ಸಂ. 15, ವಿಜಯಪುರದ ನಿಡಗುಂದಿ ಪಟ್ಟಣ ಪಂಚಾಯತಿ ವಾರ್ಡು ಸಂ 05 ಹಾಗೂ ರಾಯಚೂರಿನ ಸಿರವಾರ ಪಟ್ಟಣ ಪಂಚಾಯತಿ ವಾರ್ಡ್ ಸಂ 12ರ ವಾರ್ಡುಗಳಿಗೆ ಉಪ ಚುನಾವಣೆಯನ್ನುನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಜುಲೈ 29, 2025 ಮಂಗಳವಾರ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 05, 2025 ಮಂಗಳವಾರ, ನಾಮಪತ್ರ ಪರಿಶೀಲನೆ ಆಗಸ್ಟ್ 06, 2025 ಬುಧವಾರ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಆಗಸ್ಟ್ 08, ಶುಕ್ರವಾರ, ಮತದಾನ ಅವಶ್ಯವಿದ್ದರೆ, ಮತದಾನ ನಡೆಸುವ ದಿನಾಂಕ ಆಗಸ್ಟ್ 17, 2025 ಭಾನುವಾರ, ಮತದಾನದ ಸಮಯ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಮರು ಮತದಾನ ಅವಶ್ಯವಿದ್ದರೆ, ಮತದಾನ ನಡೆಸುವ ದಿನಾಂಕ ಆಗಸ್ಟ್ 19, 2025 ಮಂಗಳವಾರ, ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ದಿನಾಂಕ ಆಗಸ್ಟ್ 20, 2025 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಆಗಸ್ಟ್ 20, 2025 ಬುಧವಾರದಂದು ಚುನಾವಣೆ ಮುಕ್ತಾಯವಾಗಲಿದೆ.
ಸದಾಚಾರ ಸಂಹಿತೆಯು ದಿನಾಂಕ: 29/07/2025 ರಿಂದ ದಿನಾಂಕ: 20/08/2025 ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ.
ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ ನಿಯಮಗಳು, 1977ರ ನಿಯಮ 8ರ ಪ್ರಕಾರ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1 ರಲ್ಲಿ ಹೊರಡಿಸತಕ್ಕದ್ದು. ಚುನಾವಣಾ ಅಧಿಸೂಚನೆಯ ಅನುಬಂಧದಲ್ಲಿ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ಹೆಸರು, ವಾರ್ಡ್ ಸಂಖ್ಯೆ ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಅಧಿಸೂಚನೆಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಕಚೇರಿ ಮತ್ತು ಇನ್ನಿತರ ಮುಖ್ಯ ಸ್ಥಳಗಳಲ್ಲಿಯೂ ಸಹಾ ಪ್ರದರ್ಶಿಸತಕ್ಕದ್ದು ಹಾಗೂ ಅಂದೇ ಇ-ಮೇಲ್ ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೂ ಕಳುಹಿಸುವುದು.
ಅಧಿಸೂಚನೆಯ ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು, ಅದೇ ದಿನದಂದು ಪ್ರಪತ್ರ-1ಎ ರಲ್ಲಿ ಚುನಾವಣಾ ನೋಟೀಸನ್ನು ಪ್ರಕಟಿಸುವಂತೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು. ಚುನಾವಣಾ ವೇಳಾಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ (ವೆಚ್ಚ ಬಾರದಂತೆ ಪ್ರಕಟಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.
ವಿಶೇಷ ಸೂಚನೆ:
ಈಗಾಗಲೇ ನೀಡಿರುವ ನಿರ್ದೇಶನಗಳಂತೆ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡುವುದು ಮತ್ತು ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ, ಸುತ್ತೋಲೆ ಹಾಗೂ ನಿರ್ದೇಶನ ಪತ್ರಗಳ ಪ್ರತಿಗಳನ್ನು ನೀಡುವುದು.
ಘೋಷಣಾ ಪತ್ರ / ಪ್ರಮಾಣ ಪತ್ರ: ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು, ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ, ತನ್ನ ಹಿನ್ನೆಲೆ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವ-ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕತ ನಮೂನೆಯಲ್ಲಿ ಘೋಷಣಾ ಪತ್ರ / ಪ್ರಮಾಣ ಪತ್ರ (Affidavit) ಸಲ್ಲಿಸಬೇಕಾಗಿರುತ್ತದೆ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ: ಎಸ್‍ಇಸಿ 10 ಎಂಐಎಸ್‍ಸಿ 2016, ದಿನಾಂಕ:29/06/2016 ಮತ್ತು ತಿದ್ದುಪಡಿ ದಿನಾಂಕ:06/07/2016 ರಂತೆ ಕ್ರಮವಹಿಸುವುದು. ಕಾಲಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 12 ಶಾಸನ 2019. ಬೆಂಗಳೂರು, ದಿನಾಂಕ: 27/04/2020 ರಂತೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 22ಕ್ಕೆ ಮತ್ತು ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ, 1976ರ ಪ್ರಕರಣ 14ಕ್ಕೆ ತಿದ್ದುಪಡಿ ಮಾಡಲಾಗಿದ್ದು, “ಅರ್ಹ ಮತದಾರನು, ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯಾವೊಬ್ಬ ಅಭ್ಯರ್ಥಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಚಿಸದಿರುವ ಸಂದರ್ಭದಲ್ಲಿ ಆತನು “None of the above (NOTA)” (ಮೇಲಿನ ಯಾರೊಬ್ಬರಿಗೂ ಇಲ್ಲ) ಎಂದು ಮತಚಲಾಯಿಸಲು” ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 28 ಇಯುಬಿ 2018, ದಿನಾಂಕ: 01/06/2018 ರಂತೆ ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳುವುದು. ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು.
ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿಯು ನಗರ ಸಭೆಗೆ ವೆಚ್ಚ ಮಿತಿ 2.00 ಲಕ್ಷ ರೂ, ಪುರ ಸಭೆಗೆ 1.50 ಲಕ್ಷ ರೂ ಹಾಗೂ ಪಟ್ಟಣ ಪಂಚಾಯತಿಗೆ 1.00 ಲಕ್ಷ ರೂ ನಿಗಧಿಪಡಿಸಲಾಗಿದೆ.
ಭಾವಚಿತ್ರವಿರುವ ಮತಪತ್ರ : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವುದರಿಂದ, ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಇತ್ಯಾದಿಗಳನ್ನು ತೋರಿಸಲಾಗುತ್ತದೆ. ಆದರೂ ಸಹ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಘೋಷಣಾ ಪತ್ರ / ಪ್ರಮಾಣ ಪತ್ರ : ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು. ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ, ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವ-ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕøತ ನಮೂನೆಯಲ್ಲಿ ಘೋಷಣಾ ಪತ್ರ/ ಪ್ರಮಾಣ ಪತ್ರ (Affidavit) ಸಲ್ಲಿಸಬೇಕಾಗಿರುತ್ತದೆ.
ಚುನಾವಣಾ ಅಧಿಸೂಚನೆ : ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ, ಚುನಾವಣಾ ಅಧಿಸೂಚನೆಯನ್ನು ಹೊರಡಿಸುವರು. ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಸದಸ್ಯ ಸ್ಥಾನಗಳ ಉಪ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
VK NEWS DIGITAL :