ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿದ ಗುರುಪೂರ್ಣಿಮಾ ಮಹೋತ್ಸವದಲ್ಲಿ 1000ಕ್ಕೂ ಅಧಿಕ ಹಿಂದೂಗಳಿಂದ ಧರ್ಮರಕ್ಷಣೆಗಾಗಿ ಮಹಾಸಂಕಲ್ಪ!
ಬೆಂಗಳೂರು : ಇಂದು ಸದ್ಯ ಹಿಂದೂಗಳ ಮೇಲೆ ಮತ್ತು ಭಾರತದ ಮೇಲೆ ಆಗುತ್ತಿರುವ ಆಘಾತಗಳನ್ನು ಗಮನಿಸಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಿಂದೂ ಧರ್ಮದ ಮೇಲೆ ವಿವಿಧ ರೀತಿಯ ಆಯಾಮಗಳಲ್ಲಿ ಆಕ್ರಮಣಗಳು ನಡೆಯುತ್ತಿದೆ. ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಜನಸಂಖ್ಯಾ ಜಿಹಾದ್ ಇವೆಲ್ಲವುಗಳಿಂದ ಭವಿಷ್ಯದಲ್ಲಿ ಹಿಂದೂ ಸಮಾಜ ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಇಂದು ಸಮಾಜ ಕೇವಲ ಸಕಾಮ ಭಕ್ತಿಯನ್ನು ಮಾಡುತ್ತಿದೆ, ಆದರೆ ಇಂದು ಎಲ್ಲಾ ಹಿಂದೂಗಳು ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವರಂತೆ ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ನಾವು ಬಾಹ್ಯ ಶತ್ರುಗಳನ್ನ ಸುಲಭವಾಗಿ ಎದುರಿಸಬಹುದು ಆದರೆ ಆಂತರಿಕ ಶತ್ರುಗಳನ್ನ ಎದುರಿಸುವುದು ತುಂಬಾ ಕಠಿಣ. ಆದರೆ ಈ ಕಾರ್ಯವನ್ನು ಹಿಂದೂ ಸಂಘಟನೆಗಳಾದ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಬಜರಂಗದಳ ಈ ಸಂಘಟನೆಗಳು ಎದುರಿಸುತ್ತವೆ. ಈ ಎಲ್ಲ ಸಂಘಟನೆಗಳಿಗೆ ಮಾರ್ಗದರ್ಶನ ಪ್ರೇರಣೆ ಗುರುವಿನ ಸ್ಥಾನದಲ್ಲಿದ್ದು ಸನಾತನ ಸಂಸ್ಥೆಯು ಮಾಡುತ್ತಿದೆ. ಇಂತಹ ಸರ್ವ ಶ್ರೇಷ್ಠವಾದಂತಹ ಸನಾತನ ಸಂಸ್ಥೆಯ ಜೊತೆಗೆ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ಸಂಘಟನೆಗಳು ಕಾರ್ಯವನ್ನು ಮಾಡಿದರೆ ಬಹುಬೇಗ ಹಿಂದೂ ರಾಷ್ಟ್ರವನ್ನು ಸಾಕಾರ ಮಾಡಬಹುದು ಎಂದು ಶ್ರೀರಾಮ ಸೇನೆಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್ ಇವರು ಕರೆ ನೀಡಿದರು. ಅವರು 10 ಜುಲೈ 2025, ಗುರುವಾರದಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಇವರೂ ಸೇರಿದಂತೆ ಸನಾತನ ಸಂಸ್ಥೆಯ ಸಂತರಾದ ಶ್ರೀ. ಪೂಜ್ಯನೀಯ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ್ ಗೌಡ ,ಭಾ ಜ ಪ ಮುಖಂಡರಾದ ಶ್ರೀ. ಉಮೇಶ್ ಶೆಟ್ಟಿ, ಎಮ್ ಎಲ್ ಶಿವಕುಮಾರ್ ಸೇರಿದಂತೆ 1000ಕ್ಕೂ ಅಧಿಕ ಮಂದಿ ರಾಷ್ಟ್ರನಿಷ್ಠರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಗೋರಕ್ಷಣೆಯನ್ನು ಮಾಡುವ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಶ್ರೀ ಪುನೀತ್ ಕೆರೆಹಳ್ಳಿ ಇವರಿಗೆ ಸತ್ಕಾರ ಮಾಡಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ್ ಗೌಡ ಮಾತನಾಡುತ್ತ ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿಯೂ ಇಂತಹ ಸಂಘಟನೆಯ ಆವಶ್ಯಕತೆಯಿರುವುದರಿಂದ ಪ್ರಭು ಶ್ರೀರಾಮನಂತೆ ಆದರ್ಶ ಸಂಘಟನೆ ನಿರ್ಮಿಸಲು ಕಟಿಬದ್ಧರಾಗೋಣ ಎಂದರು.
ಶ್ರೀ. ಗುರು ಪ್ರಸಾದ್ ಗೌಡ ಇವರು ಮುಂದುವರೆಸಿ ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯವೆಸಗಿದ ಘಟನೆಗಳು ಬೆಳಕಿಗೆ ಬಂದಿವೆ, ಇತ್ತೀಚೆಗೆ ಮಂಡ್ಯದಲ್ಲಿ ಮತಾಂಧರು ಗೋಹತ್ಯೆ ಮಾಡುತ್ತಿರುವಾಗ ಅನೇಕ ಹಿಂದೂಗಳು ಗೋರಕ್ಷಣೆ ಮಾಡಲು ಮುಂದಾದರೆ ಪೊಲೀಸರು ಗೋರಕ್ಷಕರನ್ನೇ ಬಂಧಿಸಿದರು. ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತಾಂಧರು ಗಲಭೆಗಳನ್ನು ನಡೆಸಿದರು. ಇದರಲ್ಲಿ ಪೊಲೀಸರ ಮೇಲೂ ಆಕ್ರಮಣ ಮಾಡಲಾಯಿತು, ಹಾಗೆಯೇ ಹಿಂದೂಗಳ ಮನೆಗಳು, ಅಂಗಡಿಗಳನ್ನು ಸುಡಲಾಯಿತು. ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರು ಕಲ್ಲು ತೂರಿ ಹಿಂಸಾಚಾರ ನಡೆಸಿದರು. ಒಟ್ಟಾರೆ ಅಂಶವೇನೆಂದರೆ, ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣಾವಾದಕ್ಕಾಗಿ ಅಲ್ಲ, ಬದಲಾಗಿ ಹಿಂದೂ ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ದೇಶ’ ಕೇಳಿ ಗುಂಡು ಹಾರಿಸದೆ, ‘ಧರ್ಮ’ ಕೇಳಿ ಗುಂಡು ಹಾರಿಸಿದರು. ಇನ್ನು ನಮ್ಮ ಮುಂದೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರದಂತಹ ಅನೇಕ ಸಮಸ್ಯೆಗಳು ಇವೆ. ಇದೆಲ್ಲವನ್ನು ನೋಡಿದಾಗ ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟಗಳು ಎದುರಿಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರುಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.