ಪಟನಾ: ಬಿಹಾರದಲ್ಲಿ ದಿನೇ ದಿನೆ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಈಗಾಗಲೇ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮುಂದಿನ ಬಾರಿಯೂ ಅಧಿಕಾರ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಹೀಗಿರುವಾಗಲೇ ನಿತೀಶ್‌ಕುಮಾರ್ ಸರ್ಕಾರ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ವೊಂದನ್ನು ಘೋಷಿಸಿದ್ದಾರೆ. ಎಲ್ಲಾ ಸರ್ಕಾರಿ ಹುದ್ದೆ ಅಥವಾ ಸೇವೆಗಳಲ್ಲಿ ಮಹಿಳೆಯರಿಗೆ ಶೇ.35ಮೀಸಲಾತಿ ಘೋಷಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ನಿತೀಶ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಬಿಹಾರದ ಮೂಲ ನಿವಾಸಿಗಳಾದ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರಿ ಸೇವೆಗಳು ಮತ್ತು ಉದ್ಯೋಗಗಳಿಗೆ ನೇರ ನೇಮಕಾತಿಯಲ್ಲಿ 35% ಮೀಸಲಾತಿ ನೀಡಲಾಗುವುದು ಎಂದು ಅಧಿಕೃತ ಘೋಷಣೆ ಹೊರಬಿದ್ದಿದೆ. ಇದರ ಜೊತೆಗೆಬಿಹಾರ ಯುವ ಆಯೋಗವನ್ನು ರಚಿಸಲು ಸರ್ಕಾರ ಮುಂದಾಗಿದೆ. ಇದು ರಾಜ್ಯದಲ್ಲಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತದೆ. ಬಿಹಾರದ ಯುವಕರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ, ಅವರಿಗೆ ತರಬೇತಿ ನೀಡುವ ಮತ್ತು ಅವರನ್ನು ಸಮರ್ಥರನ್ನಾಗಿ ಮಾಡುವ ಗುರಿಯೊಂದಿಗೆ, ರಾಜ್ಯ ಸರ್ಕಾರವು ಬಿಹಾರ ಯುವ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಇಂದು ಸಂಪುಟವು ಬಿಹಾರ ಯುವ ಆಯೋಗದ ರಚನೆಗೆ ಅನುಮೋದನೆ ನೀಡಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದು ನಿತೀಶ್ ಕುಮಾರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.