ಬೆಂಗಳೂರು: ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಸರ್ಕಾರ ಮೆಟ್ರೋ ನಿಲ್ದಾಣ ಸ್ಥಾಪಿಸಬೇಕೆಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದ್ದು, ಈ ಭಾಗದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಆಗ್ರಹಿಸಿದ್ದಾರೆ.
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಬಳಿ ಮೆಟ್ರೋ ರೈಲ್ವ್ವೆ ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು, ತಮ್ಮೇಶ್ ಗೌಡರ ನೇತೃತ್ವದಲ್ಲಿ ಹುಣಸಮಾರನಹಳ್ಳಿ ಗ್ರಾಮದ ಬಳಿ ಮುಂದಿನ ಹೋರಾಟದ ಪೂರ್ವಭಾವಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರತಿಷ್ಠಿತ ರಸ್ತೆ ಇದಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 40 ಗ್ರಾಮಗಳಿವೆ. ಸುಮಾರು ಒಂದೂವರೆ ಲಕ್ಷಕ್ಕಿಂತ ಅಧಿಕ ಜನರು ವಾಸಿಸುತ್ತಿದ್ದಾರೆ. ದೇವನಹಳ್ಳಿ ಡಿ.ಸಿ.ಕಚೇರಿಗೆ ತೆರಳುವ ರಸ್ತೆ, ರಾಜಾನುಕುಂಟೆ, ಸಿಂಗನಾಯಕನಹಳ್ಳಿ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಆಂಧ್ರÀ್ರಪ್ರದೇಶಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಹ ಈ ಮಾರ್ಗದಲ್ಲೇ ಇವೆ ಎಂದು ಗಮನ ಸೆಳೆದರು.
ಆನೇಕಲ್ ರಸ್ತೆ, ಕನಕಪುರ ರಸ್ತೆ, ಕೆ.ಆರ್.ಪುರ, ಹೊಸಕೋಟೆ ರಸ್ತೆ ಹೀಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿ ಒಂದು ಅಥವಾ ಎರಡು ಕಿ.ಮೀ.ಗೆ ಒಂದರಂತೆ ಮೆಟ್ರೋ ರೈಲು ನಿಲ್ದಾಣ ಸ್ಥಾಪಿಸಿರುವ ಬಿ.ಎಂ.ಆರ್.ಸಿ.ಎಲ್. ಆರಂಭದಲ್ಲಿ ಬೆಟ್ಟಹಲಸೂರು ಕ್ರಾಸ್ ನಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಸಕಲ ಸಿದ್ಧತೆ ನಡೆಸಿತ್ತು. ಅಲ್ಲದೆ, ನಿಲ್ದಾಣ ಸ್ಥಾಪನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರದ ಹಣವನ್ನು ಸಹ ಬಿಡುಗಡೆ ಮಾಡಿದೆ. ಆದರೆ ದಿಢೀರನೆ ಮೆಟ್ರೋ ನಿಲ್ದಾಣ ಸ್ಥಾಪನೆ ಯೋಜನೆ ಕೈಬಿಟ್ಟಿರುವುದರ ಹಿಂದೆ ಅದ್ಯಾವ ಹಿತಾಸಕ್ತಿ, ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ಬಹಿರಂಗವಾಗಬೇಕಿದೆ ಎಂದು ಅವರು ಆಗ್ರಹಿಸಿದರು.
ನಿಲ್ದಾಣ ಸ್ಥಾಪಿಸದಿದ್ದರೆ ಮೆಟ್ರೋ ಓಡಾಟಕ್ಕೆ ಬಿಡುವುದಿಲ್ಲ
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆಗಾಗಿ ಸರ್ಕಾರದ ಕಣ್ತೆರಸಲು ಇಂದು ಪೂರ್ವಭಾವಿ ಸಭೆ ಕರೆದಿದ್ದೇವೆ. ಇಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ ಆಗದಿದ್ದರೆ, ಇಲ್ಲಿನ ಜನತೆಗೆ ಉಪಯೋಗವಾಗದ ಮೆಟ್ರೋ ರೈಲ್ವೆ ಅವಶ್ಯಕತೆ ಇದೆಯೇ ತಮ್ಮೇಶ್ ಗೌಡ ಎಂದು ಪ್ರಶ್ನಿಸಿದರು. ಜನೋಪಯೋಗಿ ಆಗದ ಮೆಟ್ರೋ ಯೋಜನೆಯೇ ಈ ಭಾಗಕ್ಕೆ ಬೇಡ ಎಂದು ಆಗ್ರಹಿಸಿದ್ದು, ಒಂದೊಮ್ಮೆ ಸ್ಥಳೀಯ ನಾಗರೀಕರ ಬೇಡಿಕೆಯನ್ನು ಧಿಕ್ಕರಿಸಿ ಸರ್ಕಾರ ಅಥವಾ ಬಿ.ಎಂ.ಆರ್.ಸಿ.ಎಲ್. ಮುಂದುವರೆದರೆ ಮೆಟ್ರೋ ರೈಲು ಓಡಾಟಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಶಾಸಕರು ಹಾಗೂ ಕಂದಾಯ ಸಚಿವರು ಆಗಿರುವ ಕೃಷ್ಣಬೈರೇಗೌಡ ಅವರು ಈ ಕುರಿತಂತೆ ಕೆಲವು ರೈತ ಮುಖಂಡರು ಕೊಟ್ಟ ಮನವಿ ಪತ್ರಕ್ಕೆ ಸಹಿ ಹಾಕಿ ಕೊಟ್ಟಿರುವುದನ್ನು ಬಿಟ್ಟರೆ ಬೇರ ಯಾವ ಅಗತ್ಯ ಕ್ರಮ ಕೈಗೊಳ್ಳುವ ಗೋಜಿಗೆ ಹೋಗದಿರುವುದು ವಿಶಾದಕರ ಸಂಗತಿ ಎಂದು ಅವರು ಟೀಕಿಸಿದರು.
ಪತ್ರ ನೀಡುವುದ ಸಚಿವರ ಕೆಲಸವಲ್ಲ; ಬದಲಿಗೆ ಈ ಕುರಿತಂತೆ ಕ್ಷೇತ್ರದ ಜನತೆಯ ನೇತೃತ್ವ ವಹಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಮೆಟ್ರೋ ನಿಲ್ದಾಣ ಸ್ಥಾಪನೆ ಮಾಡಿಸಬೇಕಿರುವುದು ಅವರ ಕರ್ತವ್ಯ, ಆದರೆ ಸಚಿವರು ಇದ್ಯಾವುದನ್ನು ಮಾಡದೆ ಪತ್ರ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಬ್ಯಾಟರಾಯನಪುರ ಕ್ಷೇತ್ರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಿಲಾಗಿದ್ದು, ಕ್ಷೇತ್ರದ ಹದಿನೈದು ವರ್ಷಗಳ ಹಿಂದಿನ ಜನಸಾಂದ್ರತೆಗೂ ಈಗಿನ ಜನಸಾಂದ್ರತೆಗೂ ಅಜಗಜಾಂತರ ವ್ಯತ್ಯಾಸವಿದೆ. ಕ್ಷೇತ್ರದ ಭವಿಷ್ಯದ ಜನಸಾಂದ್ರತೆ ಮತ್ತು ಬೆಳವಣಿಗೆಯನ್ನು ಅರಿತು ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಮಾನ್ಯ ಕಂದಾಯ ಸಚಿವರ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದೊಡ್ಡಜಾಲ ಹನುಮಂತುಗೌಡ, ಕ.ರ.ವೇ.ರಾಜ್ಯ ಕಾರ್ಯದರ್ಶಿ ಸಾತನೂರು ಸುರೇಶ್ ಗೌಡ, ದಲಿತ ರೈತ ಸಂಘದ ರಾಜ್ಯಾಧ್ಯಕ್ಷ ಎಸ್.ಪಿ.ಮುನಿಯಪ್ಪ, ಮರಳುಕುಂಟೆ ನಾರಾಯಣಸ್ವಾಮಿ, ಹುಣಸಮಾರನಹಳ್ಳಿ ರಾಮು, ಹಸಿರೇ ಉಸಿರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಮುಖಂಡರು ಮಾತನಾಡಿ ಬೆಟ್ಟಹಲಸೂರು ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ರೈಲು ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಉಗ್ರ ಹೋರಾಟದ ಎಚ್ಚರಿಕೆ..
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ರೈಲು ನಿಲ್ದಾಣ ಸ್ಥಾಪನೆಗೆ ಒತ್ತಾಯಿಸಿ ಜುಲೈ 11ರಿಂದ ಪತ್ರ ಚಳವಳಿ ಆರಂಭಿಸಲಿದ್ದೇವೆ. ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಈ ಭಾಗದ ಸಹಸ್ರಾರು ಜನ ಮುಖ್ಯಮಂತ್ರಿಗಳಿಗೆ ಮೆಟ್ರೋ ನಿಲ್ದಾಣ ಸ್ಥಾಪನೆ ಕುರಿತಂತೆ ಪತ್ರ ಬರೆದು ರವಾನಿಸಲಿದ್ದಾರೆ. ಈ ಪತ್ರಗಳಿಗೆ ಸರ್ಕಾರದ ಸಕಾರಾತ್ಮಕ ಉತ್ತರಕ್ಕಾಗಿ ಒಂದು ವಾರದ ಗಡುವು ನೀಡಲಾಗುವುದು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ಜುಲೈ 18ರಂದು ರಾಷ್ಟ್ರೀಯ ಹೆದ್ದಾರಿ, ತಡೆ, ಸಚಿವರ ಮನೆಗೆ ಮುತ್ತಿಗೆ ಸೇರಿದಂತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಹೋರಾಟವೆಂಬುದು ದೇಶದ ಪ್ರತಿಯೊಬ್ಬ ನಾಗರೀಕರಿಗೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕು, ನಮ್ಮ ಹೋರಾಟವನ್ನು ಹತ್ತಿಕ್ಕಲು ಈಗಾಗಲೇ ಹಲವು ಬಾರಿ ಈ ಭಾಗದ ಶಾಸಕರು ಪ್ರಯತ್ನಿಸಿದ್ದು, ಪೆÇೀಲೀಸರನ್ನು ಬಿಟ್ಟು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಬೆದರುವ ಅಥವಾ ಹೋರಾಟವನ್ನು ಕೈಬಿಡುವ ಪ್ರಮೇಯವೇ ಇಲ್ಲ ಎಂದು ಅವರು ತಿಳಿಸಿದರು.
ಆಚಾರ್ಯ ಬಡಾವಣೆ ನಿವಾಸಿಗಳ ಸಂಘದ ಶರಣಪ್ರಕಾಶ್, ಎಂ.ವಿ.ಸೋಲರೈಸರ್ ನ ದರ್ಶನ್, ಬೆಟ್ಟಹಲಸೂರು ಪ್ರಶಾಂತ್, ಪಿ.ಜಿ.ಓನರ್ಸ್ ಅಸೋಸಿಯೇಷನ್ ನ ಮಹೇಶ್, ವಿದ್ಯಾಸಾಗರ್ ವೆಲ್ಫೇರ್ ಅಸೋಸಿಯೇಷನ್ ನ ಕಿರಣ್, ಎಸ್ ಎಮ್ ಆರ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಕಿರಣ್, ಮಹಾವೀರ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಪ್ರಸನ್ನ ಸೇರಿದಂತೆ ಹಲವು ಸಂಘಗಳ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.