ಬೆಂಗಳೂರು, ಜುಲೈ 03 (ಕರ್ನಾಟಕ ವಾರ್ತೆ) : ಅಧಿಕಾರಿ / ನೌಕರರ ಹೆಸರು ಬಳಸಿಕೊಂಡು, ಯಾವುದೇ ವಿಷಯಕ್ಕಾಗಲಿ ಹಣದ ಬೇಡಿಕೆ ಇಟ್ಟಲ್ಲಿ ಅದನ್ನು ಕೂಡಲೇ ವಿವರಗಳೊಂದಿಗೆ ಸಾರ್ವಜನಿಕರು ನಿರ್ಭೀತಿಯಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಚೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ಕಚೇರಿಯ ದೂರವಾಣಿ ಸಂಖ್ಯೆ 080 – 22011205 – [email protected], 080 – 22011273 – [email protected] ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ವ್ಯಕ್ತಿಗಳು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಗೌಪ್ಯ ಮಾಹಿತಿಯು ಗೌರವಾನ್ವಿತ ಲೋಕಾಯುಕ್ತರವರಿಗೆ ತಿಳಿದು ಬಂದ ತಕ್ಷಣವೇ, ಗೌರವಾನ್ವಿತರ ನಿರ್ದೇಶನದನುಸಾರ, ಈ ಸಂಸ್ಥೆಯ ಪೊಲೀಸ್ ಅಧೀಕ್ಷಕರವರು ಮಾಹಿತಿಯೊಂದಿಗೆ ಸಲ್ಲಿಸಿದ ದೂರಿನನ್ವಯ, ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ, ಭ್ರಷ್ಟಾಚಾರ ನಿರ್ಮೂಲನಾ ಅಧಿನಿಯಮ, 1988ರಡಿ ಮೊಕದ್ದಮೆ ದಾಖಲಿಸಿಕೊಂಡು, ತನಿಖಾ ಸಮಯದಲ್ಲಿ, ನಿಂಗಪ್ಪ .ಜಿ @ ನಿಂಗಪ್ಪ ಸಾವಂತ ಎನ್ನುವ ವ್ಯಕ್ತಿಯು ಅಬಕಾರಿ ಇಲಾಖೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಇತರೆ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸ್ ಆಪ್ ಮೂಲಕ ಕರೆ ಮಾಡಿ ‘ನನಗೆ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಪರಿಚಯ ಇರುತ್ತದೆ’ ಎಂದು ಹೇಳಿಕೊಂಡು ಅವರುಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಹಣಕ್ಕೆ ಬೇಡಿಕೆಯಿಟ್ಟು ಹಣ ಸುಲಿಗೆ ಮಾಡುತ್ತಿರುವುದಾಗಿ, ಈ ವ್ಯಕ್ತಿಯು ಬೆಂಗಳೂರು ಲೋಕಾಯುಕ್ತ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿರುವುದಾಗಿ, ಇವರ ಮೊಬೈಲ್‍ನ ವಾಟ್ಸ್ ಆಪ್ ಮೂಲಕ ಸಂದೇಶಗಳನ್ನು, ಬೆಂಗಳೂರು ನಗರ-1 ವಿಭಾಗದ ಹಿಂದಿನ ಪೊಲೀಸ್ ಅಧೀಕ್ಷಕರಾದ ಜೋಷಿ ಶ್ರೀನಾಥ ಮಹದೇವ, ಐಪಿಎಸ್ ರವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು, ಸರ್ಕಾರಿ ಅಧಿಕಾರಿಗಳಿಗೆ ಕಳುಹಿಸಿ ಅಕ್ರಮವಾಗಿ ಆಸ್ತಿ ಹೊಂದಿರುವ ಬಗ್ಗೆ ಬೆದರಿಸಿ, ಅವರಿಂದ ಲಂಚದ ಹಣವನ್ನು ಕೋಡ್ ವರ್ಡ್ ‘ಞg’ ಮುಖಾಂತರ ವಸೂಲು ಮಾಡುತ್ತಿರುವುದಾಗಿ, ಅಪರಾಧಿಕ ಒಳಸಂಚು ನಡೆಸಿದ ಬಗ್ಗೆ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆಂದು ಹಾಗೂ ಅಕ್ರಮವಾಗಿ ಸಂಗ್ರಹಿಸಿದ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದು, ನಿಂಗಪ್ಪನ ಮೊಬೈಲ್ ಪರಿಶೀಲನೆಯಲ್ಲಿ, ಸುಮಾರು 24 ಕ್ರಿಪ್ಟೋ ವ್ಯಾಲೆಟ್‍ಗಳಿದ್ದು, ಅವುಗಳಲ್ಲಿ 13 ವ್ಯಾಲೆಟ್‍ಗಳಲ್ಲಿ ಸುಮಾರು 4.92 ಕೋಟಿಗಳಷ್ಟು ಹಣ ಹೂಡಿಕೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.
ಜೋಷಿ ಶ್ರೀನಾಥ ಮಹದೇವ, ಐಪಿಎಸ್ ಇವರು ಮೇಲ್ಕಂಡ ಪ್ರಕರಣದ ಆರೋಪಿ ನಿಂಗಪ್ಪ ರವರ ಸಂಪರ್ಕದಲ್ಲಿ ಇರುವುದು ತನಿಖೆ ಸಮಯದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ, ಸದರಿಯವರ ವಿರುದ್ಧವೂ ದಿನಾಂಕ 15/06/2025 ರಂದು ಘನ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು, ಅವರ ಮನೆಯನ್ನು ಶೋಧನೆ ಮಾಡಲಾಗಿದೆ. ಅದೇ ದಿವಸ ವಿಚಾರಣೆಗೆ ಹಾಜರಾಗುವಂತೆ ಬಿಎನ್‍ಎಸ್‍ಎಸ್ ಕಲಂ 35(3) ರಡಿಯಲ್ಲಿ ನೋಟೀಸ್ ನೀಡಲಾಗಿದ್ದು, ಸದರಿ ನೋಟೀಸ್ ಗೆ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ಡಬ್ಲ್ಯೂಪಿ 17564/2025 ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿರುತ್ತದೆ. ಅದೇ ರೀತಿ ಆರೋಪಿ ನಿಂಗಪ್ಪನು ಸಹ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ಡಬ್ಲ್ಯೂಪಿ 8135/2025 ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿರುತ್ತದೆ.
ಈ ಎಲ್ಲಾ ವಿಷಯಗಳಿಂದ ಬೆಂಗಳೂರು ನಗರ ಪೊಲೀಸ್ ವಿಭಾಗದ ಹಿಂದಿನ ಪೊಲೀಸ್ ಅಧೀಕ್ಷಕರಾದಂತಹ ಜೋಷಿ ಶ್ರೀನಾಥ ಮಹದೇವ, ಐಪಿಎಸ್ ರವರು ಆರೋಪಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ, ಜೋಷಿ ಶ್ರೀನಾಥ ಮಹದೇವ, ಐಪಿಎಸ್ ಇವರು The All India Services (Conduct) Rules, 1968 ರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ನಿಮಿತ್ತ, ಇವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಗಳನ್ನು ಜರುಗಿಸಲು ಹಾಗೂ ಜರುಗಿಸಿದ ಕ್ರಮಗಳ ಬಗ್ಗೆ ಈ ಕಚೇರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗೌರವಾನ್ವಿತ ಲೋಕಾಯುಕ್ತರವರ ಆದೇಶದನ್ವಯ ಈಗಾಗಲೇ ಅರೆ ಸರ್ಕಾರಿ ಪತ್ರ ಬರೆಯಲಾಗಿರುತ್ತದೆ.
ನಿಂಗಪ್ಪ ಮತ್ತು ಜೋಷಿ ಶ್ರೀನಾಥ ಮಹದೇವ, ಐಪಿಎಸ್ ಇವರುಗಳ ವಿರುದ್ಧ ಬಾಹ್ಯ ಮೂಲದಿಂದ ಯಾವುದೇ ದೂರು ಅರ್ಜಿಯು ಸ್ವೀಕೃತವಾಗಿರುವುದಿಲ್ಲ. ಆದರೆ, ಗೌರವಾನ್ವಿತ ಲೋಕಾಯುಕ್ತರವರ ಗಮನಕ್ಕೆ ಬಂದ ತಕ್ಷಣವೇ ಸದರಿಯವರ ವಿರುದ್ಧ ದೂರು ದಾಖಲಿಸಿ ಮೇಲ್ಕಂಡ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
ಗೌರವಾನ್ವಿತ ಲೋಕಾಯುಕ್ತರವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 230ಕ್ಕೂ ಹೆಚ್ಚಿನ ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿದ್ದು, ಪ್ರಸ್ತುತ ಪ್ರಗತಿಯಲ್ಲಿರುತ್ತವೆ. ಇವರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು, ಪ್ರವಾಸ ಸಂದರ್ಭಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವುದು ಹಾಗೂ ದೂರು ಪ್ರಕರಣಗಳ ವಿಲೇವಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.
ಜಲಮೂಲಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವ ಉದ್ದೇಶವನ್ನು ಸಾಕಾರಗೊಳಿಸುವ ದೂರದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಮಾಡುವ ಸದುದ್ದೇಶದಿಂದ ಗೌರವಾನ್ವಿತ ಲೋಕಾಯುಕ್ತರವರು ಈ ಸಂಬಂಧ, ಸುಮಾರು 150ಕ್ಕೂ ಹೆಚ್ಚಿನ ಸಂಖ್ಯೆಯ ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿಕೊಂಡು, ನಿರಂತರವಾಗಿ ಕ್ರಮವಹಿಸಿ, ಮೇಲ್ವಿಚಾರಣೆ ಮಾಡುತ್ತಿರುವ ಪ್ರತಿಫಲವಾಗಿ ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ ಅನೇಕ ಕೆರೆಗಳು ಪುನಶ್ಚೇತನಗೊಂಡು ಅಭಿವೃದ್ಧಿ ಕಾಣುತ್ತಿವೆ ಹಾಗೂ ಅಂತರ್ಜಲ ಮಟ್ಟವು ಸ್ವಲ್ಪಮಟ್ಟಿಗೆ ಸುಧಾರಿಸಿರುವುದು ಸಮಾಧಾನಕರವಾದ ವಿಷಯವಾಗಿರುತ್ತದೆ. ಅಲ್ಲದೇ, ಬೆಂಗಳೂರು ನಗರ ಹಾಗೂ ಇತರೆ ಜಿಲ್ಲಾ ಕೇಂದ್ರಗಳನ್ನು ಕಸಮುಕ್ತಗೊಳಿಸುವ ನಿಟ್ಟಿನಲ್ಲಿ, ಗೌರವಾನ್ವಿತರವರು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಖುದ್ದು ಪರಿಶೀಲಿಸಿ, ಅನೇಕ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು, ಆಗಿಂದ್ದಾಗೆ ಸದರಿ ಪ್ರಕರಣಗಳ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ವಿಚಾರಣೆಯನ್ನು ನಡೆಸಿ, ಶೀಘ್ರವಾಗಿ, ಪರಿಣಾಮಕಾರಿಯಾಗಿ ಕಸ ವಿಲೇವಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ.
ಇವರು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗೌರವಾನ್ವಿತ ಲೋಕಾಯುಕ್ತರವರು ದಿನಾಂಕ 15/06/2022 ರಂದು ಲೋಕಾಯುಕ್ತರಾಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಪ್ರಸ್ತುತದವರೆವಿಗೂ ಬಹುತೇಕ ಸರ್ಕಾರಿ ಕಚೇರಿಗಳಿಗೆ, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಲೋಪದೋಷಗಳನ್ನು ಪತ್ತೆ ಹಚ್ಚಿ, ಸಂಬಂಧಪಟ್ಟ ಅಧಿಕಾರಿ ನೌಕರರುಗಳ ವಿರುದ್ಧ ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿಕೊಂಡು, ಸದರಿ ಲೋಪದೋಷಗಳನ್ನು ಬಗೆಹರಿಸುವಲ್ಲಿ ಕ್ರಮ ಜರುಗಿಸುತ್ತಿದ್ದಾರೆ. ಸುಮಾರು 500 ಕ್ಕೂ ಅಧಿಕ ಶೋಧನಾ ವಾರಂಟ್ ಗಳನ್ನು ನೀಡಿ, ಅನೇಕ ಕಚೇರಿಗಳಿಂದ ದುರಾಡಳಿತಕ್ಕೆ ಸಂಬಂಧಿಸಿದಂತೆ ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಜರುಗಿಸುತ್ತಿದ್ದಾರೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಲಿಪಿಕ ಸಿಬ್ಬಂದಿ ಹುದ್ದೆಗಳಾದ ಪ್ರಥಮ ದರ್ಜೆ ಸಹಾಯಕರು-20, ದ್ವಿತೀಯ ದರ್ಜೆ ಸಹಾಯಕರು-18 ಮತ್ತು ಕ್ಲರ್ಕ್-ಕಂ-ಟೈಪಿಸ್ಟ್-28 ಹುದ್ದೆಗಳನ್ನೊಳಗೊಂಡಂತೆ ಒಟ್ಟು 66 ಹುದ್ದೆಗಳನ್ನು ನೇರ ನೇಮಕಾತಿಯಿಂದ ತುಂಬಲು ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಸ್ತುತ 08 ಪೊಲೀಸ್ ಅಧೀಕ್ಷಕರ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳನ್ನು ತುಂಬಲು ಸರ್ಕಾರಕ್ಕೆ ದಿನಾಂಕ 17/02/2025, 06/05/2025 ಮತ್ತು 05/06/2025 ರಲ್ಲಿ ಪತ್ರಗಳನ್ನು ಬರೆಯಲಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಹೊಸದಾಗಿ ಒಟ್ಟು 339 ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಸರ್ಕಾರಕ್ಕೆ ದಿನಾಂಕ 04/10/2024 ರಲ್ಲಿ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾನೂನು ಕೋಶಕ್ಕೆ ಹೊಸದಾಗಿ ಒಟ್ಟು 12 ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಸರ್ಕಾರಕ್ಕೆ ದಿನಾಂಕ 20/12/2024 ರಲ್ಲಿ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಮತ್ತು ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಎದುರಾಗಿ ನಿವೃತ್ತ ಇಂಜಿನಿಯರ್‍ಗಳನ್ನು ಮರು ನೇಮಕ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಒಂದು ಪ್ರತ್ಯೇಕವಾದ ಆಂತರಿಕ ನಿಗಾ ಘಟಕವನ್ನು ಪ್ರಾರಂಭಿಸಲು ಒಟ್ಟು 24 ಅಧಿಕಾರಿ / ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಈ ಸಂಬಂಧ, ಸರ್ಕಾರದ ಪತ್ರ ದಿನಾಂಕ 26/07/2023 & 18/06/2025 ರಲ್ಲಿ, “ಭ್ರಷ್ಟಾಚಾರ ನಿಗ್ರಹ ದಳದಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಗೊಂಡ ಸಿಬ್ಬಂದಿಯನ್ನು ಬಳಸಿಕೊಂಡು, ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಆಂತರಿಕ ನಿಗಾ ಘಟಕವನ್ನು ಮರುಸ್ಥಾಪಿಸಲು ಕ್ರಮವಹಿಸುವುದು” ಎಂದು ಈ ಕಚೇರಿಯ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿರುತ್ತದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಒಟ್ಟು 1929 ಅಧಿಕಾರಿ / ಸಿಬ್ಬಂದಿ ಹುದ್ದೆಗಳು ಮಂಜೂರಾತಿ ಇದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೂರು ಮತ್ತು ವಿಚಾರಣಾ ಪ್ರಕರಣಗಳು ದಾಖಲಾಗುತ್ತಿದ್ದು, ಪೆÇಲೀಸ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಡ್ ಮತ್ತು ಟ್ರ್ಯಾಪ್ ಪ್ರಕರಣಗಳು ನೊಂದಣಿಯಾಗುತ್ತಿದ್ದು, ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪಗಳಂತಹ ದೂರುಗಳು ಹಾಗೂ ಅನಾಮದೇಯ ಅರ್ಜಿಗಳು ಸಹ ಸ್ವೀಕೃತವಾಗುತ್ತಿರುವುದರಿಂದ, ಸದರಿ ದೂರು ಅರ್ಜಿಗಳನ್ನು ವಿವೇಚನಾಯುಕ್ತವಾಗಿ, ರಹಸ್ಯವಾಗಿ ತನಿಖೆ ಕೈಗೊಳ್ಳಲು ಹಾಗೂ ತ್ವರಿತ ವಿಚಾರಣೆಗಾಗಿ ಹಾಗೂ ಅಧಿಕಾರಿ/ಸಿಬ್ಬಂದಿಗಳ ಮೇಲೆ ನಿಗಾ ಇಡುವ ಸಲುವಾಗಿ, ಗೌರವಾನ್ವಿತ ಲೋಕಾಯುಕ್ತರವರ ಅಧೀನದಲ್ಲಿ ಮತ್ತು ಮಾರ್ಗದರ್ಶನದನ್ವಯ ಕಾರ್ಯನಿರ್ವಹಿಸುವಂತೆ, ತಾತ್ಕಾಲಿಕವಾಗಿ ಆಂತರಿಕ ನಿಗಾ ಘಟಕವನ್ನು ಪ್ರಾರಂಭಿಸಲಾಗಿದೆ.
ಆಂತರಿಕ ನಿಗಾ ಘಟಕಕ್ಕೆ ಜಿಲ್ಲಾ ನ್ಯಾಯಾಧೀಶರು ವೃಂದದ ಹುದ್ದೆಯೊಂದಿಗೆ ಪೂರಕ ಅಧಿಕಾರಿ / ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವಂತೆ ದಿನಾಂಕ 23/06/2025 ರಲ್ಲಿ ಮತ್ತೊಮ್ಮೆ ಸರ್ಕಾರವನ್ನು ಕೋರಲಾಗಿದೆ.
ಆನಂದ ಕುಮಾರ್ ಎಂಬ ವ್ಯಕ್ತಿಯು ಲೋಕಾಯುಕ್ತ ಸಂಸ್ಥೆಯ ಹೆಸರು ಹಾಗೂ ಗೌರವಾನ್ವಿತ ಉಪಲೋಕಾಯುಕ್ತ-2 ಆದ ನ್ಯಾಯಮೂರ್ತಿ ಬಿ. ವೀರಪ್ಪ ಇವರ ಹೆಸರನ್ನು ಹಾಗೂ ತಾನು ಲೋಕಾಯುಕ್ತ ಸಂಸ್ಥೆಯ ನೌಕರನೆಂದು ಹೇಳಿಕೊಂಡು ದುರ್ಬಳಕೆ ಮಾಡುತ್ತಿರುವ ವಿಷಯವು ತಿಳಿದ ಕೂಡಲೇ ಇವರ ವಿರುದ್ಧ ದಿನಾಂಕ 10/12/2024 ರಂದು ದೂರು ದಾಖಲಿಸಿದ್ದು, (ಪ್ರಥಮ ವರ್ತಮಾನ ವರದಿ) ಪ್ರಸ್ತುತ ಸದರಿ ಪ್ರಕರಣವು ತನಿಖಾ ಹಂತದಲ್ಲಿರುತ್ತದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರನ್ನು ಹೇಳಿಕೊಂಡು, ಹಣ ವಸೂಲಿ ಮಾಡುತ್ತಿರುವ ಕುರಿತಂತೆ ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ ಹಾಗೂ ಮಾಹಿತಿ ಬಂದ ತಕ್ಷಣವೇ ಅಂತಹವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಒಟ್ಟು 41 ಪ್ರಕರಣಗಳು (ಎಫ್.ಐ.ಆರ್.) ದಾಖಲಾಗಿದ್ದು, ತನಿಖೆಯು ಪ್ರಗತಿಯಲ್ಲಿರುತ್ತವೆ.
ಗೌರವಾನ್ವಿತ ಉಪಲೋಕಾಯುಕ್ತ-1 ರವರು ಕಳೆದ ಎರಡು ವರ್ಷಗಳಲ್ಲಿ 324 ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿದ್ದು, ಪ್ರಸ್ತುತ 55 ಪ್ರಕರಣಗಳು ಮುಕ್ತಾಯವಾಗಿದ್ದು, ಇನ್ನುಳಿದ ಪ್ರಕರಣಗಳು ಪ್ರಸ್ತುತ ಪ್ರಗತಿಯಲ್ಲಿರುತ್ತವೆ ಹಾಗೂ ಗೌರವಾನ್ವಿತರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು, ಪ್ರವಾಸ ಸಂದರ್ಭಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವುದು ಹಾಗೂ ದೂರು ಪ್ರಕರಣಗಳ ವಿಲೇವಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಗೌರವಾನ್ವಿತ ಲೋಕಾಯುಕ್ತ-2 ರವರು 170 ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿದ್ದು, ಪ್ರಸ್ತುತ ಪ್ರಗತಿಯಲ್ಲಿರುತ್ತವೆ ಹಾಗೂ ಗೌರವಾನ್ವಿತರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು, ಪ್ರವಾಸ ಸಂದರ್ಭಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವುದು ಹಾಗೂ ದೂರು ಪ್ರಕರಣಗಳ ವಿಲೇವಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ದಿನಾಂಕ 01/04/2023 ರಿಂದ ಪ್ರಸ್ತುತದವರೆವಿಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಹಾಗೂ ವಿಲೇವಾರಿ ಮಾಡಿರುವ ವಿವರಗಳು ಕೆಳಕಂಡಂತೆ ಇರುತ್ತದೆ.
ಗೌರವಾನ್ವಿತ ಉಪಲೋಕಾಯುಕ್ತ-1 ರವರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ರವರು ದಿನಾಂಕ 30/03/2022 ರಿಂದ 05/07/2024ರ ವರೆವಿಗೂ ಗೌರವಾನ್ವಿತ ಉಪಲೋಕಾಯುಕ್ತ-2 ಹುದ್ದೆಯ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ದಿನಾಂಕ 06/07/2024 ರಿಂದ ಗೌರವಾನ್ವಿತ ಉಪಲೋಕಾಯುಕ್ತ-2 ರವರಾಗಿ ನ್ಯಾಯಮೂರ್ತಿ ಬಿ. ವೀರಪ್ಪ ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗೌರವಾನ್ವಿತ ಲೋಕಾಯುಕ್ತರವರ ವ್ಯಾಪ್ತಿಗೆ ಸಂಬಂಧಿಸಿದ ದೂರು ಹಾಗೂ ಇಲಾಖಾ ವಿಚಾರಣಾ ಪ್ರಕರಣಗಳ ವಿವರ (ದಿನಾಂಕ 01/04/2023 ರಿಂದ 30/06/2025ರ ವರೆಗೆ)
ಕ್ರಮ ಸಂಖ್ಯೆ | ಪ್ರಕರಣಗಳು | ದಿನಾಂಕ 01/04/2023ರ ಪೂರ್ವದಲ್ಲಿ ಬಾಕಿ ಇದ್ದ ಪ್ರಕರಣಗಳ ಸಂಖ್ಯೆ | ನಂತರ ದಾಖಲಾದ ಪ್ರಕರಣಗಳ ಸಂಖ್ಯೆ | ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ | ಪ್ರಸ್ತುತ ಬಾಕಿ ಇರುವ ಪ್ರಕರಣಗಳ ಸಂಖ್ಯೆ |
1. | ದೂರು | 4048 | 6491 | 3429 | 7110 |
2 | ಇಲಾಖಾ ವಿಚಾರಣೆ | 87 | 38 | 39 | 86 |
ಗೌರವಾನ್ವಿತ ಉಪಲೋಕಾಯುಕ್ತ-1ರವರ ವ್ಯಾಪ್ತಿಗೆ ಸಂಬಂಧಿಸಿದ ದೂರು ಮತ್ತು ಇಲಾಖಾ ವಿಚಾರಣಾ ಪ್ರಕರಣಗಳ ವಿವರ: (ದಿನಾಂಕ 01/04/2023 ರಿಂದ 30/06/2025ರ ವರೆಗೆ)
ಕ್ರಮ ಸಂಖ್ಯೆ | ಪ್ರಕರಣಗಳು | ದಿನಾಂಕ 01/04/2023ರ ಪೂರ್ವದಲ್ಲಿ ಬಾಕಿ ಇದ್ದ ಪ್ರಕರಣಗಳ ಸಂಖ್ಯೆ | ನಂತರ ದಾಖಲಾದ ಪ್ರಕರಣಗಳ ಸಂಖ್ಯೆ | ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ | ಪ್ರಸ್ತುತ ಬಾಕಿ ಇರುವ ಪ್ರಕರಣಗಳ ಸಂಖ್ಯೆ |
1. | ದೂರು | 4711 | 7322 | 5106 | 6927 |
2. | ಇಲಾಖಾ ವಿಚಾರಣೆ | 1079 | 204 | 480 | 803 |
ಗೌರವಾನ್ವಿತ ಉಪಲೋಕಾಯುಕ್ತ-1ರವರು ಪ್ರಭಾರಿಯಾಗಿದ್ದ ಗೌರವಾನ್ವಿತ ಉಪಲೋಕಾಯುಕ್ತ-2 ರವರ ವ್ಯಾಪ್ತಿಗೆ ಸಂಬಂಧಿಸಿದ ದೂರು ಮತ್ತು ಇಲಾಖಾ ವಿಚಾರಣಾ ಪ್ರಕರಣಗಳ ವಿವರ: (ದಿನಾಂಕ 01/04/2023 ರಿಂದ 05/07/2024ರ ವರೆಗೆ)
ಕ್ರಮ ಸಂಖ್ಯೆ | ಪ್ರಕರಣಗಳು | ದಿನಾಂಕ 01/04/2023ರ ಪೂರ್ವದಲ್ಲಿ ಬಾಕಿ ಇದ್ದ ಪ್ರಕರಣಗಳ ಸಂಖ್ಯೆ | ನಂತರ ದಾಖಲಾದ ಪ್ರಕರಣಗಳ ಸಂಖ್ಯೆ | ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ | ಪ್ರಸ್ತುತ ಬಾಕಿ ಇರುವ ಪ್ರಕರಣಗಳ ಸಂಖ್ಯೆ |
1. | ದೂರು | 4530 | 3801 | 1806 | 6525 |
2. | ಇಲಾಖಾ ವಿಚಾರಣೆ | 722 | 102 | 322 | 502 |
ಗೌರವಾನ್ವಿತ ಉಪಲೋಕಾಯುಕ್ತ-2ರವರ ವ್ಯಾಪ್ತಿಗೆ ಸಂಬಂಧಿಸಿದ ದೂರು ಮತ್ತು ಇಲಾಖಾ ವಿಚಾರಣಾ ಪ್ರಕರಣಗಳ ವಿವರ: (ದಿನಾಂಕ 06/07/2024 ರಿಂದ 30/06/2025ರ ವರೆಗೆ)
ಕ್ರಮ ಸಂಖ್ಯೆ | ಪ್ರಕರಣಗಳು | ದಿನಾಂಕ 01/04/2023ರ ಪೂರ್ವದಲ್ಲಿ ಬಾಕಿ ಇದ್ದ ಪ್ರಕರಣಗಳ ಸಂಖ್ಯೆ | ನಂತರ ದಾಖಲಾದ ಪ್ರಕರಣಗಳ ಸಂಖ್ಯೆ | ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ | ಪ್ರಸ್ತುತ ಬಾಕಿ ಇರುವ ಪ್ರಕರಣಗಳ ಸಂಖ್ಯೆ |
1. | ದೂರು | 6565 | 5162 | 3080 | 8647 |
2. | ಇಲಾಖಾ ವಿಚಾರಣೆ | 502 | 108 | 131 | 348 |
ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಂಡ ನಂತರ ಭ್ರಷ್ಟಾಚಾರ ನಿಗ್ರಹ ದಳದಿಂದ ಈ ಸಂಸ್ಥೆಗೆ ವರ್ಗಾವಣೆಗೊಂಡ 2159 ಪ್ರಕರಣಗಳೊಂದಿಗೆ, ದಿನಾಂಕ 10/09/2022 ರಿಂದ ಪ್ರಸ್ತುತದವರೆವಿಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗದಲ್ಲಿ 205 ದಾಳಿ ಪ್ರಕರಣಗಳು, 645 ಟ್ರ್ಯಾಪ್ ಪ್ರಕರಣಗಳು, 77 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಜಿಲ್ಲಾ ಲೋಕಾಯುಕ್ತ ಕಚೇರಿಯ ನಾಮಫಲಕ, ಸಹಾಯವಾಣಿ ಸಂಖ್ಯೆ ಹಾಗೂ ಯಾವ ಯಾವ ಸಂದರ್ಭಗಳಲ್ಲಿ ದೂರು ಅರ್ಜಿ ಸಲ್ಲಿಸಬಹುದು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗಿದೆ ಹಾಗೂ ಈ ಸಂಸ್ಥೆಯ ನಾಮಫಲಕ & ಸಹಾಯವಾಣಿಯನ್ನು ಅಳವಡಿಸಿಕೊಳ್ಳದೇ ಇರುವ ಸರ್ಕಾರಿ ಕಚೇರಿಯಲ್ಲಿ ಅಳವಡಿಸುವ ಕುರಿತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಅಳವಡಿಸಲು ಕ್ರಮ ಜರುಗಿಸಲಾಗುತ್ತಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ, ಕರ್ನಾಟಕ ಲೋಕಾಯುಕ್ತ ಅಧಿನಿಯಮ ಹಾಗೂ ಭ್ರಷ್ಟಾಚಾರ ತಡೆಗಟ್ಟುವಿಕೆ ಅಧಿನಿಯಮದಡಿಯಲ್ಲಿ, ಸಾರ್ವಜನಿಕ ನೌಕರರುಗಳ ವಿರುದ್ಧ ದಾಖಲಾಗಿ ತನಿಖೆಯ ಹಂತದಲ್ಲಿದ್ದ ಪ್ರಕರಣಗಳ ಸಂಬಂಧ, ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಇನ್ನಿತರೆ ಸಾರ್ವಜನಿಕ ನೌಕರರು, ಈ ಸಂಸ್ಥೆಯಲ್ಲಿ ಪ್ರಕರಣ ದಾಖಲಾದ ಸಾರ್ವಜನಿಕ ನೌಕರರನ್ನು ಅಥವಾ ಇತರೆ ಸಾರ್ವಜನಿಕ ನೌಕರರನ್ನು ದೂರವಾಣಿ / ಮೊಬೈಲ್ ಮೂಲಕ ಸಂಪರ್ಕಿಸಿ, ಪ್ರಕರಣಗಳ ಇತ್ಯರ್ಥಕ್ಕಾಗಿ ಹಣಕ್ಕಾಗಿ ಪೀಡಿಸುವುದು ಅಥವಾ ಅಮಿಷ ಒಡ್ಡುವುದು, ಸಾರ್ವಜನಿಕ ನೌಕರರು ಯಾವುದೇ ಅಮಿಷಕ್ಕೆ ಒಳಗಾಗದೇ, ಕರೆ ಮಾಡಿದಂತಹ ವ್ಯಕ್ತಿಗಳ ಹೆಸರು ಮತ್ತು ಮೊಬೈಲ್ ನಂಬರುಗಳನ್ನು ಕೂಡಲೇ ಈ ಕಚೇರಿಯ ದೂರವಾಣಿ ನಂಬರ್ / ಇ-ಮೇಲ್ ಗೆ ತಿಳಿಸತಕ್ಕದ್ದು.
ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯ ಅಡಿಯಲ್ಲಿ ಲಂಚ ಸ್ವೀಕರಣೆ ಎಷ್ಟು ಅಪರಾಧವೋ ಲಂಚವನ್ನು ನೀಡುವುದು ಸಹ ಅಪರಾಧವಾಗಿರುತ್ತದೆ. ಈ ಕಾಯ್ದೆಯಡಿ, ಲಂಚ ನೀಡುವ ಅಥವಾ ಲಂಚಕ್ಕೆ ಪ್ರಚೋದಿಸುವ ವ್ಯಕ್ತಿಗಳ (ಖಾಸಗಿ ವ್ಯಕ್ತಿಗಳನ್ನೊಳಗೊಂಡಂತೆ) ವಿರುದ್ದ, ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಆದುದರಿಂದ ಯಾವುದೇ ಸಾರ್ವಜನಿಕ ನೌಕರರಿಗೆ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕಾರಿ ಎಂದು ಹೇಳಿ / ಅಥವಾ ಅವರ ಹೆಸರುಗಳನ್ನು ಬಳಸಿಕೊಂಡು, ಪ್ರಕರಣದ ಇತ್ಯರ್ಥಕ್ಕಾಗಿ ಆಗಲೀ ಅಥವಾ ಇನ್ಯಾವುದೇ ವಿಷಯಕ್ಕಾಗಲೀ, ಹಣದ ಬೇಡಿಕೆ ಇಟ್ಟಲ್ಲಿ ಅಂತಹ ವಿಷಯಗಳಲ್ಲಿ ಕೂಡಲೇ ವಿವರಗಳೊಂದಿಗೆ ಈ ಕಚೇರಿಗೆ ತಿಳಿಸಬೇಕಾಗಿ ಸಾರ್ವಜನಿಕ ಅಧಿಕಾರಿಗಳಿಗೆ / ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ತಿಳಿಹೇಳಲಾಗಿದೆ.
ಗೌರವಾನ್ವಿತ ಲೋಕಾಯುಕ್ತರವರು, ಗೌರವಾನ್ವಿತ ಉಪಲೋಕಾಯುಕ್ತರವರುಗಳು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಆಡಳಿತ ವಿಭಾಗ, ಪೊಲೀಸ್ ವಿಭಾಗ, ವಿಚಾರಣಾ ವಿಭಾಗ, ತಾಂತ್ರಿಕ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳು ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 ಹಾಗೂ ಭ್ರಷ್ಟಾಚಾರ ನಿರ್ಮೂಲನ ಅಧಿನಿಯಮದಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಆಡಳಿತದಲ್ಲಿನ ಭ್ರಷ್ಟಾಚಾರ, ದುರಾಡಳಿತವನ್ನು ತಡೆಗಟ್ಟುವಲ್ಲಿ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಭಾರತದಲ್ಲಿಯೇ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಸೇವೆಗಳನ್ನು ಒದಗಿಸುತ್ತಿರುವ ಸರ್ವೋತ್ತಮ ಬೆಳವಣಿಗೆಯನ್ನು ಸಹಿಸದ ಕೆಲವು ಭ್ರಷ್ಟ ಅಧಿಕಾರಿ / ನೌಕರರುಗಳು, ಅವರ ವಿರುದ್ಧ ದೂರು ಅಥವಾ ದಾಳಿ ಪ್ರಕರಣ ದಾಖಲಾಗಬಹುದೆಂಬ ಆಲೋಚನೆಯಿಂದ, ವ್ಯವಸ್ಥಿತ ಪಿತೂರಿಯೊಂದಿಗೆ ಅವರನ್ನು ರಕ್ಷಿಸಿಕೊಳ್ಳುವ ದುರುದ್ದೇಶದಿಂದ, ಕೆಲವು ದುಷ್ಟ ಶಕ್ತಿಗಳು ಹಾಗೂ ದುಷ್ಟ ಸಂಘಟನೆಗಳೊಂದಿಗೆ ಸೇರಿಕೊಂಡು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೆಸರಿಗೆ ಚ್ಯುತಿ ಬರುವ ರೀತಿ ವರ್ತಿಸುತ್ತಿರುವುದನ್ನು ಸಾರ್ವಜನಿಕರು ಗಮನಿಸಬಹುದು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿನ ದೂರುದಾರರಿಗೆ ಗೌರವಾನ್ವಿತ ಲೋಕಾಯುಕ್ತರವರು, ಗೌರವಾನ್ವಿತ ಉಪಲೋಕಾಯುಕ್ತ-1 & ಗೌರವಾನ್ವಿತ ಉಪಲೋಕಾಯುಕ್ತ-2 ರವರು ಕ್ಷಿಪ್ರವಾಗಿ ಪರಿಹಾರ ಒದಗಿಸಿಕೊಡುತ್ತಿದ್ದು, ಈ ಬಗ್ಗೆ ಸದರಿ ದೂರುದಾರರುಗಳಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ದಕ್ಷತೆ ಹಾಗೂ ಪ್ರಾಮಾಣಿಕತೆ ಬಗ್ಗೆ ಪ್ರಶಂಸೆ ಹಾಗೂ ಕೃತಜ್ಞತೆಯನ್ನು ಅರ್ಪಿಸಿ ಹಲವಾರು ಪತ್ರಗಳನ್ನು ಬರೆಯುತ್ತಿದ್ದು, ಇದು ನಮ್ಮ ಸಂಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಲೋಕಾಯುಕ್ತದ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
TODAY’S HEADLINES 3-7-2025