ನವದೆಹಲಿ: ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ 110 ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ತಡರಾತ್ರಿ ನವದೆಹಲಿಗೆ ಬಂದಿಳಿಯಿತು. ಈ ಸ್ಥಳಾಂತರ ಕಾರ್ಯಾಚರಣೆಗೆ ಭಾರತ ‘ಆಪರೇಷನ್ ಸಿಂಧು’ ಎಂದು ಹೆಸರಿಟ್ಟಿದೆ.
ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನಡುವೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮೊದಲು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು. ಈ ಪೈಕಿ 110 ಮಂದಿ ಇರಾನ್ ಗಡಿ ದಾಟಿ ನೆರೆಯ ಅರ್ಮೇನಿಯಾ ದೇಶಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳನ್ನು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಸ್ವದೇಶಕ್ಕೆ ಕರೆತರಲಾಗುತ್ತಿದೆ
ವಿದ್ಯಾರ್ಥಿಗಳ ಸ್ಥಳಾಂತರಿಸುತ್ತಿರುವ ಕಾರ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಧನ್ಯವಾದ ತಿಳಿಸಿದೆ. ಉಳಿದ ವಿದ್ಯಾರ್ಥಿಗಳನ್ನೂ ಶೀಘ್ರದಲ್ಲೇ ಸ್ಥಳಾಂತರಿಸುವ ಭರವಸೆ ಇದೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್ ನಿಂದ ಸ್ವದೇಶಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು:
ಇರಾನ್‌ನಿಂದ ಆಗಮಿಸಿದ ವಿದ್ಯಾರ್ಥಿಗಳ ಪೈಕಿ ಹಲವರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿದರು. ಈ ಪೈಕಿ ಓರ್ವ ವಿದ್ಯಾರ್ಥಿ, “ನಮ್ಮ ದೇಶಕ್ಕೆ ಮರಳಿರುವುದು ತುಂಬಾ ಹರ್ಷ ತಂದಿದೆ. ಇರಾನ್ ನಲ್ಲಿ ನಾವಿದ್ದ ಉರ್ಮಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿರಲಿಲ್ಲ . ಆದರೆ ಇತರ ಸ್ಥಳಗಳಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಭಾರತ ಸರ್ಕಾರದ ಸಹಾಯದಿಂದಾಗಿ ನಾವು ಮನೆಗೆ ಮರಳಿದ್ದೇವೆ” ಎಂದರು.
ಮತ್ತೋರ್ವ ವಿದ್ಯಾರ್ಥಿ ಮಾತನಾಡಿ, “ನಾನು ಉರ್ಮಿಯಾ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ನಾವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹತ್ತಿರದಿಂದ ನೋಡಿದ್ದೇವೆ. ನಮಗೆ ಭಯವಾಗುತ್ತಿತ್ತು. ಇದೀಗ ಭಾರತಕ್ಕೆ ಮರಳಿರುವುದಕ್ಕೆ ಖುಷಿಯಾಗಿದೆ. ಭಾರತ ಸರ್ಕಾರ ಅದರಲ್ಲೂ ವಿಶೇಷವಾಗಿ ವಿದೇಶಾಂಗ ಸಚಿವಾಲಯಕ್ಕೆ ನಾನು ತುಂಬಾ ಕೃತಜ್ಞ. ನಮ್ಮ ಪೋಷಕರು ಕೂಡಾ ನನ್ನ ಬಗ್ಗೆ ಚಿಂತಿತರಾಗಿದ್ದರು. ಆದರೆ ಈಗ ಅವರ ದುಗುಡ ದೂರವಾಗಿದೆ” ಎಂದು ಹೇಳಿದರು.
ವಿದ್ಯಾರ್ಥಿ ಯಾಸಿರ್ ಗಫರ್ ಮಾತನಾಡಿ, “ನಾವು ಕ್ಷಿಪಣಿಗಳು ಹಾದುಹೋಗುವುದನ್ನು ಮತ್ತು ರಾತ್ರಿಯಲ್ಲಿ ದೊಡ್ಡ ಶಬ್ದಗಳನ್ನು ಕೇಳುತ್ತಿದ್ದೆವು. ಇದೀಗ ಸ್ವದೇಶಕ್ಕೆ ತಲುಪಿರುವುದು ಸಂತೋಷ ತಂದಿದೆ. ನಾನು ನನ್ನ ಕನಸುಗಳನ್ನು ಬಿಟ್ಟಿಲ್ಲ. ಪರಿಸ್ಥಿತಿ ತಿಳಿಯಾದಾಗ ಮತ್ತೆ ಇರಾನ್‌ಗೆ ಹೋಗುತ್ತೇವೆ” ಎಂದು ತಿಳಿಸಿದರು.
ಭಾರತೀಯ ರಾಯಭಾರ ಕಚೇರಿ ನಮಗಾಗಿ ಎಲ್ಲವನ್ನೂ ಸಿದ್ಧಪಡಿಸಿತ್ತು. ನಮಗೆ ಯಾವುದೇ ಸಮಸ್ಯೆಯಾಗಲಿಲ್ಲ. ನಾವು ಮೂರು ದಿನಗಳಿಂದ ಪ್ರಯಾಣಿಸುತ್ತಿದ್ದೇವೆ. ಆದ್ದರಿಂದ ಸ್ವಲ್ಪ ದಣಿದಿದ್ದೇವೆ. ನಾವು ಹೊರಡುವಾಗ ಉರ್ಮಿಯಾದಲ್ಲಿ ಪರಿಸ್ಥಿತಿ ಅಷ್ಟೊಂದು ಕೆಟ್ಟದಾಗಿರಲಿಲ್ಲ. ಆದರೆ, ನಮ್ಮ ವಸತಿ ನಿಲಯದ ಕಿಟಕಿಗಳಿಂದ ನಾವು ಕ್ಷಿಪಣಿಗಳನ್ನು ನೋಡುತ್ತಿದ್ದೆವು” ಎಂದು ವಿದ್ಯಾರ್ಥಿನಿ ಮರಿಯಮ್ ರೋಜ್ ಹೇಳಿದರು
ವಿದ್ಯಾರ್ಥಿನಿಯೊಬ್ಬರ ತಾಯಿ ಮಾತನಾಡಿ, “ನನ್ನ ಮಗಳು ಮನೆಗೆ ಮರಳಿದ್ದಕ್ಕೆ ನನಗೆ ಭಾರೀ ಸಂತೋಷವಾಗಿದೆ. ಆದಷ್ಟು ಬೇಗ ಎಲ್ಲರ ಮಕ್ಕಳೂ ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಲಿ. ಭಾರತ ಸರ್ಕಾರ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಿದೆ. ನಮ್ಮ ಮಕ್ಕಳು ಎಲ್ಲಿಯೂ ಯಾವುದೇ ತೊಂದರೆ ಎದುರಿಸಲಿಲ್ಲ” ಎಂದು ನಿರಾಳರಾದರು.





















