ರಾಮನಗರ: ರಾಮನಗರದಲ್ಲಿ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಶಿವರಾಜ್ ಎಂಬವರ ಆರು ತಿಂಗಳ ಕಂದಮ್ಮ (child death) ಸಾವನ್ನಪ್ಪಿದೆ. 6 ತಿಂಗಳ ಮಗುವಿನ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದೆ. ಶಿವರಾಜ್ ಎಂಬವರ ಆರು ತಿಂಗಳ ಪ್ರಾಯದ ಮಗು ಶರಣ್ಯ ಮೃತಪಟ್ಟವಳು. ನಕಲಿ ವೈದ್ಯ ಮಹಮ್ಮದ್ ಸೈಫುಲ್ಲ ಎಂಬಾತ ಎಂದು ಗುರುತಿಸಲಾಗಿದೆ. ಮಹಮ್ಮದ್ ಸೈಫುಲ್ಲ ಎಂಬವನು ವೈದ್ಯಕೀಯ ಕೋರ್ಸ್ ಮಾಡದೇ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸಣ್ಣ ಕೋಣೆಯೊಂದರಲ್ಲಿ ಚಿಕಿತ್ಸೆ ನೀಡುತ್ತಿದ್ದ. ಈತನಿಂದಾಗಿ ಮಗು ಮರಳಿ ಬಾರದ ಲೋಕಕ್ಕೆ ತೆರಳಿದೆ. ಇದು ಜಿಲ್ಲೆಯ ಜನರನ್ನು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ರಾಮನಗರದಲ್ಲಿ ಸಾಕಷ್ಟು ನಕಲಿ ಕ್ಲಿನಿಕ್ಗಳು ತಲೆ ಎತ್ತಿದ್ದು ಅವುಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ ಒಟ್ಟು 193 ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಮಾತ್ರ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ ಆರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ. ಇಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ನಕಲಿ ಕ್ಲಿನಿಕ್ಗಳ ಬಗ್ಗೆ ಜನರು ಎಚ್ಚರಿದಿಂದ ಇರಬೇಕು. ಗಮನಕ್ಕೆ ಬಂದ ಕೂಡಲೇ ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮನವಿ ಮಾಡಿದ್ದಾರೆ