ಬೆಂಗಳೂರು, ಜೂನ್ 14, (ಕರ್ನಾಟಕ ವಾರ್ತೆ):
ಅಲುಮ್ನಿ ಅಸೋಸಿಯೇಷನ್, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ “ಮಾವು ಮೇಳ-2025″ರ ಉದ್ಘಾಟನೆಯನ್ನು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ. ಎಸ್. ರಮೇಶ್ ಇವರು ನೆರವೇರಿಸಿ ಇಂದು ಮತ್ತು ನಾಳೆ ಈ ಮೇಳವು ಮಾವು ಬೆಳೆಗಾರರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಕ್ಕರೆ ಗ್ರಾಹಕರಿಗೆ ಕಡಿಮೆ ದರದಲ್ಲಿ ತಾಜ ಮಾವಿನಹಣ್ಣು ದೊರಕುತ್ತದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಡಾ. ಕೆ. ಸಿ. ವೀರಣ್ಣ, ಕುಲಪತಿಗಳು, ಕ.ಪ.ಪ.ಮಿ.ವಿ.ವಿ., ಬೀದರ ಇವರು ಮಾತನಾಡಿ ಮಾವಿನ ಎಲ್ಲಾ ಜಾತಿಯ ತಳಿಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಇಂತಹ ಮೇಳಗಳನ್ನು ನಿರಂತರವಾಗಿ ಏರ್ಪಡಿಸುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಗೆ ಮತ್ತು ಗ್ರಾಹಕರಿಬ್ಬರಿಗೂ ಅನುಕೂಲಕರವಾಗಲಿದೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಡಾ. ಹೆಚ್. ಎಲ್. ಹರೀಶ್, ಆಡಳಿತ ಮಂಡಳಿ ಸದಸ್ಯರು, ಕೃ.ವಿ.ವಿ., ಬೆಂಗಳೂರು ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಸಿ. ಜಿ. ನಾಗರಾಜು, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ಮತ್ತು ಅಲುಮ್ನಿ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.





















