Live Stream

[ytplayer id=’22727′]

| Latest Version 8.0.1 |

State News

ಕಾಂತರಾಜು ಆಯೋಗ ವರದಿ ಕೈಬಿಡುವಂತೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹ

ಕಾಂತರಾಜು ಆಯೋಗ ವರದಿ ಕೈಬಿಡುವಂತೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹ

*ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ಪ್ರಮಾಣ ಶೇ 56 ರಿಂದ ಶೇ 50ಕ್ಕೆ ಇಳಿಸಿ ಆದೇಶ ಜಾರಿ ಅಪ್ರಸ್ತುತವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತ ವರದಿ ಕೈಬಿಡುವಂತೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹ*

ಬೆಂಗಳೂರು, ಜೂ, 10; ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಿ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂತರಾಜು, ಜಯಪ್ರಕಾಶ್ ಹೆಗಡೆ ನೇತೃತ್ವದ ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತ ವರದಿ ಅಪ್ರಸ್ತುವಾಗಿದೆ. ಹೀಗಾಗಿ ಈ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಡಾ. ಗಾ.ನಂ. ಶ್ರೀಕಂಠಯ್ಯ, ಕಾಂತರಾಜು ಆಯೋಗ ವರದಿ ತಿರಸ್ಕರಿಸಿ ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಆದರೆ ಕಾಂತರಾಜು, ಜಯಪ್ರಕಾಶ್ ಹೆಗಡೆ ಆಯೋಗ ಮೀಸಲಾತಿ ಪ್ರಮಾಣವನ್ನು ಶೇ 75 ಕ್ಕೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದ್ದು, ಇದರ ಅನುಷ್ಠಾನ ಕಾರ್ಯಸಾಧುವಲ್ಲ. ಇದೀಗ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರವೇ ತನ್ನ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಹೀಗಿರುವಾಗ ಯಾವ ಸಮುದಾಯದಿಂದ ಮೀಸಲಾತಿ ಕಸಿದು ಹಿಂದುಳಿದ ವರ್ಗಕ್ಕೆ ನೀಡುತ್ತೀರಿ ಎಂದು ಪ್ರಶ್ನಿಸಿದರು.
ಕೆಎಟಿ ಆದೇಶದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಶೇ 56ರಷ್ಟು ಮೀಸಲಾತಿ ನೀಡಿರುವ ಆದೇಶವನ್ನು 9 ನ್ಯಾಯಮೂರ್ತಿಗಳ ಪೀಠ ರದ್ದುಪಡಿಸಿ, ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಮಿತಿಗೊಳಿಸಿ ಆದೇಶಿಸಿದೆ. ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ಸಿ ಹೊರಡಿಸಿರುವ ಅಧಿಸೂಚನೆಯನ್ನು ಸಹ ಭಾಗಶ: ರದ್ದುಗೊಳಿಸಿ, ಮೀಸಲಾತಿಯನ್ನು ಶೇಕಡ 56 ರಿಂದ ಶೇಕಡ 50ಕ್ಕೆ ಇಳಿಸಿದೆ. ಹೀಗಿರುವಾಗ ಇದೇ ತಿಂಗಳ 12 ರಂದು ಜಾತಿ ಜನಗಣತಿ ಕುರಿತ ಚರ್ಚೆಗೆ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯನ್ನು ರದ್ದು ಮಾಡಬೇಕು. ಅನಗತ್ಯವಾಗಿ ಸರ್ಕಾರದ ಹಣ, ಸಮಯವನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು.
ಸರ್ಕಾರದ ಆದೇಶದಿಂದ ವರದಿ ಅನುಷ್ಠಾನ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಕುರುಬ ಸಮುದಾಯಕ್ಕೆ ಶೇ 103 ರಷ್ಟು ಮೀಸಲಾತಿ ಕಲ್ಪಿಸುವಂತೆ ವರದಿ ಶಿಫಾರಸ್ಸು ಮಾಡಿದ್ದು, ಇದು ಅತಿ ಹೆಚ್ಚಿನ ಪ್ರಮಾಣವಾಗಿದೆ. ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಬಗ್ಗೆ ಚಾಂಪಿಯನ್ ರೀತಿ ಮಾತನಾಡುವ ಸಿದ್ದರಾಮಯ್ಯ ಅವರು ಇಷ್ಟೊಂದು ಸ್ವಜನಪಕ್ಷಪಾತಿಯಾಗಬಾರದು. ಬಹುತೇಕ ಎಲ್ಲಾ ಜಾತಿ, ಜನಾಂಗಗಳು ಕಾಂತರಾಜು ಆಯೋಗದ ವರದಿಯಲ್ಲಿ ತಪ್ಪುಗಳಿವೆ ಎಂದು ತಿಳಿಸಿವೆ. ಆದುದ್ದರಿಂದ ಸಂಶಯಾಸ್ಪದವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಿದ್ಧಪಡಿಸಿರುವುದನ್ನು ಕೈಬಿಟ್ಟು, ಮತ್ತೊಮ್ಮೆ ವಿಶ್ವಾಸಯುತ ಸಮೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾಂತರಾಜು ಆಯೋಗದ ವರದಿಯ ಸಮೀಕ್ಷೆಯು 2014-15 ರಲ್ಲಿ ನಡೆದಿದ್ದು. ಈಗಾಗಲೇ 10 ವರ್ಷ ಪೂರ್ಣಗೊಂಡಿದೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದದಂತೆ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ನೀಡಬೇಕಾಗಿದೆ. ಆದರೆ ಈಗಿನ ಕರ್ನಾಟಕ ಸರ್ಕಾರ ಕಾನೂನಿಗೆ ಯಾವುದೇ ಮಾನ್ಯತೆ ಕೊಡದೆ ಕಾಂತರಾಜು – ಜೆ.ಪಿ.ಹೆಗಡೆ ವರದಿಯನ್ನು ಅನುಷ್ಠಾನಗೊಳಿಸಲು ಹೊರಟಿರುವುದು ವಿಪರ್ಯಾಸ. ಸರ್ಕಾರವೇ ಕಾನೂನನ್ನು ಪಾಲಿಸದಿದ್ದಲ್ಲಿ ಇನ್ಯಾರು ಕಾನೂನನ್ನು ಪಾಲಿಸಬೇಕು ಎಂದರು.
ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್ ಯಲಚವಾಡಿ ಮಾತನಾಡಿ, ಸವೀಕ್ಷೆಯಲ್ಲಿ ರಾಜ್ಯದ ಎಲ್ಲಾ ನಾಗರೀಕರ ಮಾಹಿತಿಯನ್ನು ಸಂಗ್ರಹಿಸಿಲ್ಲ. ಒಟ್ಟು ಜನಸಂಖ್ಯೆಯ ಶೇಕಡಾ 90 ರಷ್ಟು ಜನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆದಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ. 10 ವರ್ಷಗಳಲ್ಲಿ ಜನಸಂಖ್ಯೆ ಏರಿಕೆಯಾಗಿದ್ದು, ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. 10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗಿಂತ ದೂರ ಇರಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಎಂ.ಎ.ಆನಂದ್, ಸಂಘದ ಪ್ರಧಾನ ಕಾರ್ಯದರ್ಶಿ ಅಡಿಟರ್ ನಗರಾಜ್ ಯಲಚವಾಡಿ, ಕಡಬಗೆರೆ ಒಕ್ಕಲಿಗರ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಸಿ.ಶಿವರಾಮು, ಒಕ್ಕಲಿಗ ಸಮಾಜದ ಮುಖಂಡರಾದ ರಂಗನರಸಿಂಹಯ್ಯ, ಮೇಲುಕೋಟೆ ಶಿವರಾಜು ಮತ್ತಿತರರು ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";