ಜಿತೇಂದ್ರೀಯ : ಮಾರುತಿ ಎಂದರೆ ಮೂರನೇ ನೇತ್ರವನ್ನು ತೆರೆದು ಕಾಮದೇವನನ್ನು ಭಸ್ಮಗೊಳಿಸಿದ ಶಿವಶಂಕರನ ಅಂಶಾವತಾರವಾಗಿದ್ದಾನೆ. ಆದ್ದರಿಂದ ಅವನು ಕಾಮವಾಸನೆ ಸಹಿತ ಷಡ್ರಿಪುಗಳನ್ನು ಜಯಿಸಿದ್ದಾನೆ. ಎಲ್ಲ ಇಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹನುಮಂತನಿಗಿರುವುದರಿಂದ ಅವನನ್ನು ‘ಜಿತೇಂದ್ರಿಯ’ನೆಂದು ಗೌರವಿಸಲಾಗಿದೆ.
ವಜ್ರಾಂಗ ಬಜರಂಗಬಲಿ : ಹನುಮಂತನ ದೇಹ ವಜ್ರದಂತೆ ಕಠೋರವಾಗಿದೆ. ಆದ್ದರಿಂದ ಶತ್ರುಗಳು ಬಿಡುವ ದಿವ್ಯಾಸ್ತ್ರಗಳು ಅವನ ದೇಹವನ್ನು ಭೇದಿಸುವುದಿಲ್ಲ. ತ್ರೇತಾಯುಗದಲ್ಲಿ ರಾವಣನ ಸೈನ್ಯವು ವಾನರ ಸೈನ್ಯದ ಮೇಲೆ ಮತ್ತು ದ್ವಾಪರಯುಗದಲ್ಲಿ ಮಹಾಭಾರತ ಯುದ್ಧದಲ್ಲಿ ಕೌರವರು ಪಾಂಡವರ ಮೇಲೆ ಪ್ರಯೋಗಿಸಿದ ದಿವ್ಯಾಸ್ತ್ರಗಳು ಹನುಮಂತನ ಕೃಪೆಯಿಂದ ವಿಫಲವಾದವು. ತ್ರೇತಾ ಮತ್ತು ದ್ವಾಪರ ಯುಗದ ಯುದ್ಧಗಳಲ್ಲಿ ಶತ್ರುಗಳಿಂದ ಅಸಂಖ್ಯಾತ ಶಸ್ತ್ರಾಸ್ತ್ರಗಳ ಆಘಾತವಾದರೂ ವಜ್ರಾಂಗ ಹನುಮಂತನ ಮೇಲೆ ಯಾವುದೇ ಪರಿಣಾಮವಾಗಲಿಲ್ಲ.
ಮಹಾವೀರ ಮತ್ತು ಮಹಾಶಕ್ತಿಶಾಲಿ : ಹನುಮಂತನು ಸೀತೆಯನ್ನು ಹುಡುಕಲು ಮಾರುವೇಷದಲ್ಲಿ ಲಂಕಾನಗರದೊಳಗೆ ಪ್ರವೇಶಿಸಿದಾಗ, ಲಂಕೆಯನ್ನು ರಕ್ಷಿಸುತ್ತಿದ್ದ ಲಂಕಿಣಿ ಎಂಬ ಹೆಸರಿನ ರಾಕ್ಷಸಿ ಅವನನ್ನು ಪ್ರವೇಶದ್ವಾರದಲ್ಲಿ ತಡೆದಳು. ಆಗ ಹನುಮಂತನು ತಕ್ಷಣ ವಿರಾಟ ರೂಪ ಧರಿಸಿ ಲಂಕಿಣಿಯ ಹಣೆಗೆ ರಭಸದಿಂದ ಮುಷ್ಟಿಪ್ರಹಾರ ಮಾಡಿದನು. ಒಂದು ಮುಷ್ಟಿ ಪ್ರಹಾರದಲ್ಲಿ ಲಂಕಿಣಿಯ ದುರ್ದಶೆಯಾಯಿತು ಹಾಗೂ ಅವಳು ಹನುಮಂತನಿಗೆ ಶರಣಾದಳು.
ಯುದ್ಧಕುಶಲ ಮತ್ತು ದಿವ್ಯಾಸ್ತ್ರಗಳ ಬಗ್ಗೆ ಜ್ಞಾನವಿರುವವನು : ಹನುಮಂತನು ವೀರರೂಪವನ್ನು ಧರಿಸಿ ಸೂರಸಾ ರಾಕ್ಷಸಿ, ಅಕ್ಷಯಕುಮಾರ, ಜಂಬುಮಾಳಿ, ದೇವಾಂತಕ, ನರಾಂತಕ, ತ್ರಿಶಿರಾ, ಅಹಿರಾವಣ, ಮಹಿರಾವಣ, ಮಾಯಾಸುರ ಮೊದಲಾದ ರಾಕ್ಷಸರೊಂದಿಗೆ ಯುದ್ಧ ಮಾಡಿ ಅವರನ್ನು ವಧಿಸಿದನು. ಅವನಿಗೆ ದಿವ್ಯಾಸ್ತ್ರಗಳ ಜ್ಞಾನವಿತ್ತು.
ನೇತೃತ್ವಗುಣ ಸಂಪನ್ನ : ಹನುಮಂತನು ಅನೇಕ ಪ್ರಸಂಗಗಳಲ್ಲಿ ಉತ್ತಮ ನೇತೃತ್ವವನ್ನು ಮಾಡಿದನು. ಅದರ ಉದಾಹರಣೆಗಳು ಈ ಮುಂದಿನಂತಿವೆ. ಹನುಮಂತ, ಅಂಗದ, ಜಾಂಬವಂತ ಮತ್ತು ವಾನರ ಸೇನೆಯು ಸೀತೆಯನ್ನು ಹುಡುಕಲು ದಕ್ಷಿಣ ದಿಕ್ಕಿಗೆ ಹೋದಾಗ ಸಂಪಾತಿಯು ಅವರಿಗೆ ಸೀತಾಮಾತೆಯು ಸಮುದ್ರದಲ್ಲಿರುವ ಲಂಕೆಯ ದ್ವೀಪದಲ್ಲಿ ಬಂಧನದಲ್ಲಿದ್ದಾಳೆಂದು ಹೇಳಿತು. ‘೧೦೦ ಯೋಜನ ಸಮುದ್ರವನ್ನು ದಾಟಿ ಲಂಕೆಗೆ ಯಾರು ಹೋಗುವರು’, ಎನ್ನುವ ಪ್ರಶ್ನೆ ಎಲ್ಲ ವಾನರರ ಮುಂದಿತ್ತು. ಆಗ ಹನುಮಂತನು ೧೦೦ ಯೋಜನ ಸಮುದ್ರವನ್ನು ಒಂದೇ ಉಸಿರಿನಲ್ಲಿ ದಾಟಿ ಶತ್ರುವಿನ ನಗರದೊಳಗೆ ಪ್ರವೇಶಿಸಿ ಸೀತಾಮಾತೆಯನ್ನು ಹುಡುಕುವ ಹೊಣೆಯನ್ನು ಸ್ವೀಕರಿಸಿ ಅದನ್ನು ಪೂರ್ಣಗೊಳಿಸಿದನು.
ಸಂಕಟದಲ್ಲಿಯೂ ಭಯಭೀತನಾಗದೆ ಧೈರ್ಯದಿಂದ ಉಪಾಯವನ್ನು ಕಂಡು ಹಿಡಿಯುವ ಹನುಮಂತ !
ಲಂಕೆಯಲ್ಲಿ ಯುದ್ಧದ ಸಮಯದಲ್ಲಿ ಇಂದ್ರಜಿತನು ರಾಮ ಮತ್ತು ಲಕ್ಷ್ಮಣನ ಮೇಲೆ ನಾಗಪಾಶವನ್ನು ಪ್ರಯೋಗಿಸಿ ಅವರನ್ನು ಬಂಧಿಸಿದನು, ಆಗ ವಾನರ ಸೇನೆಯಲ್ಲಿ ಹಾಹಾಕಾರ ಹರಡಿತು. ಆಗ ಹನುಮಂತನು ಶೂನ್ಯ ಗತಿಯಲ್ಲಿ ವೈಕುಂಠಕ್ಕೆ ಹೋಗಿ ಗರುಡನನ್ನು ಕರೆದುಕೊಂಡು ಪೃಥ್ವಿಗೆ ಬಂದನು. ಗರುಡನು ರಾಮ ಮತ್ತು ಲಕ್ಷ್ಮಣರನ್ನು ನಾಗಪಾಶದಿಂದ ತಕ್ಷಣ ಮುಕ್ತಗೊಳಿಸಿದನು.
(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಮಾರುತಿ’ ಓದಿರಿ.)
ಸಂಗ್ರಹ :
ಶ್ರೀ. ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : ೯೩೪೨೫೯೯೨೯೯)