ಬೆಂಗಳೂರು: ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಇಂದು ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಲ್ಲದೇ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಮುಖ್ಯಮಂತ್ರಿಗಳ ಮನೆಯ ಬಳಿ ಹೋದಾಗ ನಮ್ಮನ್ನು ಬಂಧಿಸಬೇಕಿತ್ತು. ಮುಂಚೆಯೇ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದು ಸರಿಯಲ್ಲ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಮುಖ್ಯಮಂತ್ರಿಗಳ ಮನೆಯ ಹತ್ತಿರ ಬಂದಾಗ ಅರೆಸ್ಟ್ ಮಾಡುತ್ತಿದ್ದೆವು. ಇವತ್ತು ಮುಂಜಾಗ್ರತಾ ಕ್ರಮವೆಂದು ಮುಂಚಿತವಾಗಿಯೇ ಬಂಧಿಸಿದ್ದು, ಇದು ಸರಿಯಲ್ಲ ಎಂದು ತಿಳಿಸಿದರು. ರಾಜ್ಯದ ಉದ್ದಗಲಕ್ಕೆ ನಮ್ಮ ಹೋರಾಟ ಮುಂದುವರೆಸಲಿದ್ದೇವೆ; ಜನವಿರೋಧಿ ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.