ನೋಂದಾಯಿತವಲ್ಲದ ಮದರಸಾಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ : ಸರ್ಕಾರಕ್ಕೆ ವಂಚನೆ

VK NEWS
By -
1 minute read
0

ಬೆಂಗಳೂರು, ಏ,3; ಹೆಗಡೆ ನಗರದ ಜಾಮೀಯ ಮೊಹಮ್ಮದೀಯ ಮಂಸೂರ ಆಡಳಿತ ಮಂಡಳಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿದ್ದು,  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈ ನಕಲಿ ಶಿಕ್ಷಣ ಸಂಸ್ಥೆ 5 ಲಕ್ಷ ರೂಪಾಯಿ ಅನುದಾನ ಪಡೆದು ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷಾ ಆರೋಪಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಂದಾಯಿತವಾಗಿರುವ "ದಿ ಅಲ್ ಜಾಮೀಯ ಮೊಹ್ಮದೀಯಾ ಎಜುಕೇಷನ್ ಸೊಸೈಟಿ ಎಂದು ಮುಂಬೈನ ನೋಂದಾಯಿತ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದೆ. ಈ ಸೊಸೈಟಿಯ ಹೆಸರನ್ನು "ಅಲ್ ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ" ಮತ್ತು "ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ" ಎಂದು ತೋರಿಸಿಕೊಂಡು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದೆ.  ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ನೆಪದಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017ರ ಅಕ್ಟೋಬರ್ 25 ರಂದು 10 ಲಕ್ಷ ರೂಪಾಯಿ  ಮಂಜೂರು ಮಾಡಿಸಿಕೊಂಡಿತ್ತು. ಈ ಪೈಕಿ 5 ಲಕ್ಷ  ರೂಪಾಯಿ ಬಿಡುಗಡೆಯಾಗಿದೆ.  ಈ ಶಾಲೆಯು ನೋಂದಾಯಿತವಲ್ಲದ ಮದರಸದಿಂದ ನಡೆಯುತ್ತಿದ್ದು,  ನೋಂದಣಿಯಾಗದ ಮದರಸಗೆ ಅನುದಾನ ನೀಡಿರುವುದು ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆ ಎಂದು ನೊಂದಾಯಿಸಿ, ಅನುದಾನ ಪಡೆದಿರುವುದು  ಅಕ್ಷಮ್ಯ ಅಪರಾಧ ಎಂದರು.

ಈ ಶಾಲೆ ಒಂದು ಸಂಸ್ಥೆ. ಟ್ರಸ್ಟ್ ಅಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಮಕ್ಕಳ ಹಕ್ಕುಗಳ ಶಿಕ್ಷಣ ಕಾಯ್ದೆ 2009 ರ ಪ್ರಕಾರ ನೋಂದಾಯಿತ ಹೆಸರಿನಲ್ಲಿ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಶಾಲಾ ರಶೀದಿಯಲ್ಲಿ ಜಾಮೀಯಾ ಮೊಹಮ್ಮದೀಯ ಮಂನ್ಸೂರ ರೆಸಿಡೆನ್ಸಿಯಲ್ ಶಾಲೆ (ನಿರ್ವಹಣೆ: "ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ"). ಮತ್ತು ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆ (ನಿರ್ವಹಣೆ: "ಅಲ್ ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ") ಎಂದು ನಮೂದಿಸಿದ್ದಾರೆ ಎಂದರು.

ಶಾಲೆ ನಡೆಸುತ್ತಿರುವ ಜಾಗದ ವ್ಯಾಜ್ಯ ಕೂಡ ನ್ಯಾಯಾಲಯದಲ್ಲಿದೆ. ವಿವಾದಿತ ಹಿನ್ನೆಲೆಯ ಶಾಲೆ ಮತ್ತು ಆಡಳಿತ ಮಂಡಳಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆ, ಉತ್ತಮ ಶಿಕ್ಷಣ ಸಾಧ್ಯವಿಲ್ಲ. ಮಾನ್ಯತೆಯನ್ನು ನೋಂದಾಯಿತವಲ್ಲದ ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ಪಡೆದಿದ್ದು, ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದೆ. ಮಕ್ಕಳ ಶೋಷಣೆ ನಡೆಯುತ್ತಿದ್ದು, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.  ತೆರಿಗೆ ವಂಚನೆ, ಭೂಕಬಳಿಕೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಈ ಶಾಲೆಯ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷಾ ಆಗ್ರಹಿಸಿದರು.


Post a Comment

0Comments

Post a Comment (0)