2 ವರ್ಷದ ಮಕ್ಕಳಲ್ಲೂ ಕಂಡುಬರುತ್ತಿದೆ ಮಲಬದ್ಧತೆ ಸಮಸ್ಯೆ

VK NEWS
By -
0

ಮಲಬದ್ಧತೆ  ಸಮಸ್ಯೆ  ಎಲ್ಲಾ ವಯಸ್ಸಿನವರಲ್ಲೂ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದ್ರೆ ಇತ್ತೀಚಿಗೆ ತೀರಾ 2 ವರ್ಷದ ಮಕ್ಕಳಲ್ಲೂ ಮಲಬದ್ಧತೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತಜ್ಞರು.


ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಕಂಡುಬರಲು ಕಾರಣವೇನು ಎಂದು ನೋಡಿದಾಗ ಈಗಿನ ಆಹಾರ ಪದ್ಧತಿ ಪ್ರಮುಖವಾಗಿದೆ. ಅನಾರೋಗ್ಯಕರ ಆಹಾರ ಸೇವನೆ, ಜಂಕ್ ಫುಡ್, ಬ್ರೆಡ್, ಬಿಸ್ಕತ್ ಮತ್ತು ರಸ್ಕ್ಗಳ ಅತಿಯಾದ ಸೇವನೆ, ತರಕಾರಿ ಮತ್ತು ಹಣ್ಣುಗಳಂತಹ ಫೈಬರ್ ಭರಿತ ಆಹಾರ ಸೇವನೆಯ ಕೊರತೆ ಮತ್ತು ಸಾಕಷ್ಟು ದ್ರವ ಸೇವನೆ ಮಾಡದಿರುವುದು ಪ್ರಮುಖ ಕಾರಣವಾಗಿದೆ. ಅನೇಕ ಮಕ್ಕಳು ಅಸಮತೋಲಿತ ಆಹಾರ ಸೇವಿಸುತ್ತಿರುವುದು ಮಲಬದ್ಧತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ ಹೇಳಿದ್ದಾರೆ.

 
ಮಲಬದ್ಧತೆ ಸಮಸ್ಯೆ ಕಂಡುಬರಲು ಪತ್ಯೇಕ ಹವಾಮಾನ, ಕಾಲ ಎಂಬುದಿಲ್ಲ. ಆದ್ರೆ ಬೇಸಿಗೆಯಲ್ಲಿ ಮಕ್ಕಳು ಸರಿಯಾಗಿ ನೀರನ್ನು ಕುಡಿಯದ ಕಾರಣದಿಂದ ಹಾಗೂ ಜಡವಾದ ಜೀವನಶೈಲಿಯನ್ನು ಅನುಸರಿಸುತ್ತಿರುವುದರಿಂದ ಕೂಡ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅನೇಕ ಮಕ್ಕಳು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಬದಲು ಮನೆಯೊಳಗೆ ಸದಾ ಕುಳಿತಿರುವುದು, ತಿನ್ನುವುದು, ಟಿವಿ ಅಥವಾ ಮೊಬೈಲ್ ಪರದೆಯನ್ನು ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ರೀತಿಯ ಜಡವಾದ ಜೀವನಶೈಲಿ ಹೊಂದಿರುವುದರಿಂದ ಮಲಬದ್ಧತೆ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ಹಾಲು ಮತ್ತು ಡೈರಿ ಉತ್ಪನ್ನಗಳ ಅತಿಯಾದ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು. ಹೊಟ್ಟೆ ನೋವು, ಹಸಿವು ಕಡಿಮೆಯಾಗುವುದು, ಹೊಟ್ಟೆಯಲ್ಲಿ ಅಸ್ವಸ್ಥತೆ, ಗಟ್ಟಿಯಾದ ಮಲ ಮತ್ತು ಅನಿಯಮಿತವಾಗಿ ಕರುಳಿನಲ್ಲಿ ಸಂಕಟದ ಲಕ್ಷಣ ಅನುಭವಿಸುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದನ್ನು ನಾವು ನೋಡುತ್ತಿದ್ದು, ಮೂರರಿಂದ ನಾಲ್ಕು ದಿನಗಳಿಗೊಮ್ಮೆಯಾದ್ರು ಒಂದು ಪ್ರಕರಣ ದಾಖಲಾಗುತ್ತಿದೆ ಎಂದು ತಜ್ಞರು ತಿಳಿಸಿದರು.

ಮಕ್ಕಳಲ್ಲಿ ಕಂಡುಬರುವ ಮಲಬದ್ಧತೆಯನ್ನು ಪರಿಹರಿಸಲು ಮೊದಲು ಮಕ್ಕಳ ಆಹಾರ ಪದ್ಧತಿಯನ್ನು ಪೋಷಕರು ಪರಿಶೀಲಿಸಬೇಕು.  ಹೆಚ್ಚು ಫೈಬರ್ ಭರಿತ ಆಹಾರವನ್ನು ಸೇವಿಸುವುದರ ಜೊತೆಗೆ ಸಾಕಷ್ಟು ದ್ರವ ರೂಪದ ಆಹಾರ ಸೇವಿಸುವಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಒಂದು ವೇಳೆ ಈ ರೀತಿಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡ ನಂತರವೂ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲವೆಂದರೆ ಕೂಡಲೇ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಆಹಾರ ಸಮಾಲೋಚನೆ ತೆಗೆದುಕೊಳ್ಳುವುದು ಕೂಡ ಮಲಬದ್ಧತೆ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆಹಾರ ಕ್ರಮ ಬದಲಾವಣೆ ಮತ್ತು ದೈಹಿಕ ಚಟುವಟಿಕೆಯ ಹೊರತಾಗಿಯೂ ಮಕ್ಕಳು ನಿರಂತರ ಮಲಬದ್ಧತೆಯನ್ನು ಹೊಂದಿದ ಸಂದರ್ಭದಲ್ಲಿ ವೈದ್ಯರ ಚಿಕಿತ್ಸೆ ನೆರವಾಗಲಿದೆ.

ಇದನ್ನು ಏಕೆ ನಿರ್ಲಕ್ಷಿಸಬಾರದು ?
ಮಕ್ಕಳು ದೀರ್ಘಕಾಲದ ಮಲಬದ್ಧತೆಯನ್ನು ಹೊಂದಿರುವ ಸಂದರ್ಭದಲ್ಲಿ ವೈದ್ಯರ ಸಲಹೆ ಮುಖ್ಯವಾಗುತ್ತದೆ. ದೀರ್ಘಕಾಲದ ಮಲಬದ್ಧತೆ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಆಗಾಗ್ಗೆ ಹೊಟ್ಟೆ ನೋವಿಗೆ ತುತ್ತಾಗಬಹುದು ಮತ್ತು ಅವರ ಸಾಮಾನ್ಯ ಚಟುವಟಿಕೆಗಳಲ್ಲಿ ಕುಂಠಿತ ಕಂಡುಬರಬಹುದು. ಚಿಕ್ಕ ಮಕ್ಕಳು ತಮಗೆ ಎದುರಾಗುವ ಅಸ್ವಸ್ಥತೆಯ ಬಗ್ಗೆ ಹೇಳದೇ ಇರಬಹುದು, ಆದ್ದರಿಂದ ಪೋಷಕರು ದೀರ್ಘಕಾಲದ ಮಲಬದ್ಧತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪೋಷಕರು ಮೂತ್ರದ ಸೋಂಕುಗಳು, ಜಠರಗರುಳಿನ ಸಮಸ್ಯೆಗಳು ಅಥವಾ ಹೈಪೋಥೈರಾಯಿಡ್ ನಂತಹ  ಸಮಸ್ಯೆಗಳನ್ನು ಪರಿಶೀಲಿಸುವ ವೈದ್ಯರನ್ನು ಒಮ್ಮೆ ಸಂಪರ್ಕಿಸಬೇಕು. ಮಕ್ಕಳಿಗೆ ನಿಯಮಿತವಾದ ಮಲವಿಸರ್ಜನೆ ತರಬೇತಿ ನೀಡುವುದು ಕೂಡ ಮುಖ್ಯವಾದ ಸಂಗತಿ. ಮಕ್ಕಳು ಆರೋಗ್ಯಕರ ದಿನಚರಿಯನ್ನು ಆರಂಭಿಸಲು ನಿಗದಿತ ಸಮಯದಲ್ಲಿ ಶೌಚಾಲಯ ಬಳಕೆಯನ್ನು ಪೋಷಕರು ಪ್ರೋತ್ಸಾಹಿಸಬೇಕು. ಮಲಬದ್ಧತೆಯನ್ನು ನಿರ್ಲಕ್ಷಿಸುವುದರಿಂದ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು, ಆದರೆ ಸಮಯೋಚಿತವಾಗಿ ಅದರ ಬಗ್ಗೆ ಎಚ್ಚರವಹಿಸುವ ಮೂಲಕ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ ಅವರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651



Post a Comment

0Comments

Post a Comment (0)