ವಾಣಿಜ್ಯ ತೆರಿಗೆ ಇಲಾಖೆಯ ಜಾರಿ, ದಕ್ಷಿಣ ವಲಯ, ಬೆಂಗಳೂರು ವಿಭಾಗದ 72 ಅಧಿಕಾರಿಗಳು ಮಾರ್ಚ್ 29 ರಂದು ಬೆಂಗಳೂರಿನ ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಎಲೆಕ್ಟ್ರಿಕಲ್, ಮೊಬೈಲ್ ಹಾಗೂ ಬಿಡಿಭಾಗಗಳು ಮತ್ತು ಹಾರ್ಡ್ ವೇರ್ ಅಂಗಡಿಗಳ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿದ್ದಾರೆ.
ದಾಳಿಯ ಸಮಯದಲ್ಲಿ ವರ್ತಕರ ವಹಿವಾಟನ್ನು ಕೂಲಂಕುಷವಾಗಿ, ವಿಶೇಷವಾಗಿ ಅಂತರರಾಜ್ಯ ವಹಿವಾಟನ್ನು ಪರಿಶೀಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ವರ್ತಕರು ಗ್ರಾಹಕರು ಖರೀದಿಸಿದ ವಸ್ತುಗಳಿಗೆ ತೆರಿಗೆ ಬಿಲ್ಲುಗಳನ್ನು ನೀಡುತ್ತಿಲ್ಲ ಹಾಗೂ ಅಂತರರಾಜ್ಯದಿಂದ ತೆರಿಗೆ ಪಾವತಿಸದೆ ಎಲೆಕ್ಟ್ರಿಕಲ್, ಹಾರ್ಡ್‍ವೇರ್ ವಸ್ತುಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ ಎಂದು ಇಲಾಖೆಗೆ ದೂರುಗಳು ಬಂದ ಹಿನ್ನಲೆಯಲ್ಲಿ ಹಾಗೂ ಚಲಿಸುವ ಜಾಗೃತಿ ದಳದ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಜಾರಿ ವಿಭಾಗದ ಅಪರ ಆಯುಕ್ತರಾದ ಚಂದ್ರಶೇಖರ್ ನಾಯಕ್ ಎಲ್. ಅವರು ತಿಳಿಸಿದ್ದಾರೆ.
ದಾಳಿಯ ಸಮಯದಲ್ಲಿ ಅಧಿಕಾರಿಗಳು ಸುಮಾರು 3 ಕೋಟಿಯನ್ನು ಬಚ್ಚಿಟ್ಟ ತೆರಿಗೆಯನ್ನು ಪತ್ತೆ ಹಚ್ಚಿದ್ದು, 2 ಕೋಟಿಯಷ್ಟು ತೆರಿಗೆ ಮತ್ತು ದಂಡವನ್ನು ಸಂಗ್ರಹಿಸಿದ್ದು ಲೆಕ್ಕ ಪುಸ್ತಕಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.
ಗ್ರಾಹಕರು ಖರೀದಿಸುವ ಎಲ್ಲಾ ವಸ್ತುಗಳಿಗೂ ವರ್ತಕರು ಕಡ್ಡಾಯವಾಗಿ ರಸೀತಿಯನ್ನು ನೀಡಬೇಕೆಂದು, ಒಂದು ವೇಳೆ ರಸೀತಿಯನ್ನು ನೀಡದಿದ್ದ ಪಕ್ಷದಲ್ಲಿ ಗ್ರಾಹಕರು / ಸಾರ್ವಜನಿಕರು ವಾಣಿಜ್ಯ ತೆರಿಗೆಯ ಕಂಟ್ರೋಲ್ ರೂಮ್ ಸಂಖ್ಯೆ 080 25704970 ಗೆ ಮಾಹಿತಿ ನೀಡಬಹುದಾಗಿದೆ ಎಂದು ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.