ವಿಪಕ್ಷಗಳ ವಿರೋಧದ ನಡುವೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ
13 ಗಂಟೆಗಳ ಕಾಲ ಎನ್ ಡಿಎ ಹಾಗೂ ಪ್ರತಿಪಕ್ಷಗಳ ನಡುವೆ ಚರ್ಚೆ
ನವದೆಹಲಿ: ಭಾರೀ ಚರ್ಚೆಗೆ ಕಾರಣವಾದ 1995ರ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಸುಮಾರು 13 ಗಂಟೆಗಳ ಕಾಲ ಆಡಳಿತ ಎನ್ ಡಿಎ ಹಾಗೂ ಪ್ರತಿಪಕ್ಷಗಳ ಸಂಸದರು ನಡುವೆ ಬಿರುಸಿನ ಚರ್ಚೆ ನಡೆಯಿತು. ಮಸೂದೆಯನ್ನು ಹಿಂಪಡೆಯಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದರೂ, ಶೇ. 288 ಮತಗಳ ಬೆಂಬಲದೊಂದಿಗೆ ಮಸೂದೆ ಅಂಗೀಕಾರವಾಯಿತು. ಇದಕ್ಕೆ 232 ಮಂದಿ ವಿರೋಧಿಸಿದರು.
ಏಪ್ರಿಲ್ 2ರಂದು ಬೆಳಿಗ್ಗೆ ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರವಾಗಿ ಲೋಕಸಭೆಯಲ್ಲಿ ಗದ್ದಲ ಮೂಡಿತು. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಿದರು. ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ಟೀಕಿಸಿದವು. 2023ರ ಆಗಸ್ಟ್ನಲ್ಲೇ ಮಸೂದೆಯನ್ನು ಮಂಡಿಸಲಾಗಿದ್ದರೂ, ತಿದ್ದುಪಡಿ ಅಗತ್ಯವಿತ್ತು. ಆ ಕಾರಣದಿಂದ ಮಸೂದೆಯನ್ನು ಸಂಸದೀಯ ಜಂಟಿ ಸಮಿತಿಗೆ ಕಳುಹಿಸಲಾಗಿತ್ತು. ಸಮಿತಿಯ ವರದಿ ಆಧಾರದ ಮೇಲೆ ಹೊಸ ತಿದ್ದುಪಡಿ ಸೇರಿಸಿ ಮಸೂದೆ ಮಂಡಿಸಲಾಯಿತು.
ಮಸೂದೆ ಮಂಡಿಸುವ ವೇಳೆ ಕಿರಣ್ ರಿಜಿಜು ಮಾತನಾಡಿದ್ದು, “ಈ ಮಸೂದೆಯು ಕಾನೂನಾಗಿ ಬದಲಾದರೆ ಇದನ್ನು ‘ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ’ (UMEED) ಕಾಯ್ದೆ ಎಂದು ಕರೆಯಲಾಗುತ್ತದೆ.” ಈ ತಿದ್ದುಪಡಿ ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಹಾಗೂ ಪಾರದರ್ಶಕತೆ ಒದಗಿಸಲು ತರಲಾಗಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ, ಈ ಮಸೂದೆ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಿಲ್ಲ ಎಂದು ಸ್ಪಷ್ಟಪಡಿಸಿದರು. ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಹೆಚ್ಚು ದಕ್ಷತೆ ತರಲು ಹಾಗೂ ಸರ್ಕಾರದ ನಿಯಂತ್ರಣ ಸುಗಮಗೊಳಿಸಲು ಈ ತಿದ್ದುಪಡಿ ಅನಿವಾರ್ಯವಾಗಿದೆ ಎಂದು ಹೇಳಿದರು. ಆದರೆ, ಪ್ರತಿಪಕ್ಷಗಳು ಈ ವಿವರಣೆಯನ್ನು ಒಪ್ಪಲಿಲ್ಲ.
ವಿಪಕ್ಷಗಳ ತೀವ್ರ ವಿರೋಧ
ಈ ಮಸೂದೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಹಿನ್ನಡೆಗೊಳಿಸುತ್ತದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದವು. ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದವು. ದೇಶದಲ್ಲಿ ಜನಾಂಗೀಯ ವಿಭಜನೆಯ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರ, ವಕ್ಫ್ ಆಸ್ತಿಗಳನ್ನು ಸೀಮಿತಗೊಳಿಸಲು ಈ ಮಸೂದೆ ತರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.