ಭಕ್ತಾದಿಗಳ ಮನೆಬಾಗಿಲಿಗೆ ದೇವರ ಪ್ರಸಾದ ತಲುಪಿಸಲು ‘ಇ-ಪ್ರಸಾದ’ ಲೋಕಾರ್ಪಣೆ : ರಾಮಲಿಂಗಾರೆಡ್ಡಿ (Ramalinga Reddy)

VK NEWS
By -
0

ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ  ದೇವಾಲಯಗಳಲ್ಲಿ ಭಕ್ತಾದಿಗಳಿಗೆ ವಿತರಿಸುವ ಪ್ರಸಾದವನ್ನು ಭಕ್ತಾದಿಗಳ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ‘ಇ-ಪ್ರಸಾದ’ ಲೋಕಾರ್ಪಣೆ ಮಾಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಮತ್ತು ಸಿ.ಎಸ್.ಇ ಆಡಳಿತ ಇವರ ಸಹಯೋಗದೊಂದಿಗೆ ಇಂದು ಬಿ.ಎಂ.ಟಿ.ಸಿ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಇ-ಪ್ರಸಾದ’ ಕಾರ್ಯಕ್ರಮದ ಉದ್ಘಾಟನೆ ಹಾಗೂ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದರು.

ಭಾರತ ದೇಶದಲ್ಲೇ ಪ್ರಪ್ರಥಮವಾಗಿ ಮನೆಮನೆಗೆ ದೇವರ ಪ್ರಸಾದವನ್ನು ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ  ಮುಜರಾಯಿಗೆ ಸೇರಿದ ಸುಮಾರು 34,556 ದೇವಸ್ಥಾನಗಳಿದ್ದು, ಎ, ಬಿ ಗ್ರೇಡ್‍ಗೆ ಸೇರಿದ 398 ದೇವಸ್ಥಾನಗಳಿವೆ.  ಅವುಗಳಲ್ಲಿ ಶ್ರೀ ಹುಲಿಗಮ್ಮ, ಶ್ರೀ ರೇಣುಕಾ ಯಲ್ಲಮ್ಮ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಎಂದರು.

ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಹೋಗಲು ಇಚ್ಚೆ ಇದ್ದರೂ ಕೆಲವೊಮ್ಮೆ ಎಲ್ಲರಿಗೂ ಭೇಟಿ ನೀಡಲು ಸಾಧ್ಯವಾಗುವುದಿಲ್ಲ.  ವಯೋವೃದ್ಧರಿಗೆ, ವಿಕಲಚೇತನರಿಗೆ, ಒಂಟಿಯಾಗಿ ವಾಸಿಸುವರಿಗೆ, ದೂರ ದೇಶದಲ್ಲಿ ಇರುವವರಿಗೆ ಹೋಗಲು ಅವಕಾಶ ಸಿಗುವುದಿಲ್ಲ. ಅಂತಹವರು ಹಾಗೂ ಮನೆಯಲ್ಲಿ ಶುಭಕಾರ್ಯ ಮಾಡುವವರು ದೇವರ ಪ್ರಸಾದ ತರಿಸಿಕೊಂಡು ಪೂಜೆ ಮಾಡಬಹುದು ಎನ್ನುವ ಉದ್ದೇಶದಿಂದ “csc e-Governance Servicess India Limited”   ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಪ್ರಾಯೋಗಿಕವಾಗಿ ಪ್ರಮುಖ 14 ದೇವಸ್ಥಾನಗಳಾದ ಬೆಂಗಳೂರು ಜಯನಗರದ ಶ್ರೀ ವಿನಾಯಕ ಸ್ವಾಮಿ ದೇವಾಲಯ, ಮಂಡ್ಯ ಜಿಲ್ಲೆಯ ಚೆಲುವನಾರಾಯಣ ಸ್ವಾಮಿ ದೇವಾಲಯ, ಮೈಸೂರು ಜಿಲ್ಲೆಯ ನಂಜನಗೂಡಿನ  ಶ್ರೀ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯ, ಕೋಲಾರ ಜಿಲ್ಲೆಯ ಮಾಲೂರು  ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ಬೆಂಗಳೂರಿನ ಹಲಸೂರು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಉಡುಪ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ, ಬೆಂಗಳೂರು ಗವೀಪುರಂ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ,  ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ ಬೀದರ್, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನಗುಡ್ಡ ಬೆಳಗಾವಿ.  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಾಲಯ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ.  ಕೊಪ್ಪಳ ಜಿಲ್ಲೆಯ ಹುಲಿಗಿ ಶ್ರೀ ಹುಲಿಗಮ್ಮ ದೇವಾಲಯ,  ಗುಲ್ಬರ್ಗ ಜಿಲ್ಲೆಯ ಗಾಣಗಾಪುರ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯಗಳ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸದರಿ ದೇವಾಲಯಗಳಲ್ಲಿ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ ಅಥವಾ ಭಂಡಾರ, ಕುಮಕುಮ, ಬಿಲ್ವಪತ್ರೆ, ಹೂವು, ತುಳಸಿ  ಹಾಗೂ ಪ್ಯಾಕೆಟ್ ಅಳತೆಯ ಲ್ಯಾಮಿನೇಟೆಡ್  ಭಾವಚಿತ್ರ, ಡಾಲರ್, ದಾರ, ಸ್ತೋತ್ರವನ್ನು ಪ್ರಿಂಟ್ ಮಾಡಿಸಿ ಭಕ್ತಾದಿಗಳಿಗೆ ತಲುಪಿಸಲಾಗುವುದು ಎಂದರು.

ಭಕ್ತಾದದಿಗಳು ಈ ದೇವಾಲಯಗಳಿಂದ ಸಿಎಸ್‍ಸಿ ಸಂಸ್ಥೆಯ ಮುಖಾಂತರ ಪ್ರಸಾದಗಳನ್ನು ಪಡೆಯಬಹುದು. ಮುಜರಾಯಿ ದೇವಸ್ಥಾನಗಳಲ್ಲಿ ಸರ್ಕಾರಿ ವೇತನ ಪಡೆಯುವ ಅರ್ಚಕರಿಗಿಂತ ಅನುವಂಶಿಕ ಅರ್ಚಕರು ಸುಮಾರು 34 ಸಾವಿರ ಇದ್ದಾರೆ. ಇವರು ನಿಧನರಾದರೆ ಒಬ್ಬರಿಗೆ 2 ಲಕ್ಷ ರೂ.ಗಳನ್ನು ನೀಡಲಾಗುವುದು. ಇವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ಸಾವಿರದಿಂದ 1 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಧರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಂ.ವಿ.ವೆಂಕಟೇಶ್, ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯೆ ಶ್ರೀಮತಿ ಮಲ್ಲಿಕಾ ಪ್ರಶಾಂತ ಪಕ್ಕಲಾ, ಸಿಎಸ್‍ಸಿ ಮುಖ್ಯಸ್ಥ ಷಫಿಕ್ ಮಹಮ್ಮದ್ ಉಪಸ್ಥಿತರಿದ್ದರು.

Post a Comment

0Comments

Post a Comment (0)