ಬೆಂಗಳೂರು: ರಾಜ್ಯ ಸರಕಾರವು ಚುನಾವಣೆ ಎದುರಿಸುವುದನ್ನು ತಪ್ಪಿಸಿಕೊಳ್ಳಲು ಮಸೂದೆಗಳನ್ನು ತರುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಈ ಸರಕಾರ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಹಾಲಿನ ದರ ಏರಿಸುವ ವಿಷಯ ಕ್ಯಾಬಿನೆಟ್ ಮುಂದಿದೆ. ಹಾಲಿನ ದರ ಸಬ್ಸಿಡಿ ರೈತರಿಗೆ ಕೊಡಿ; ಆದರೆ ಜನರ ಮೇಲೆ ಯಾಕೆ ಹೊರೆ ಹಾಕುತ್ತೀರಿ? ನಿಮಗೆ ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಒತ್ತಾಯಿಸಿದರು.
ಗ್ಯಾರಂಟಿಗಳನ್ನು ಘೋಷಿಸಿದ್ದೀರಿ; ಎಲ್ಲದರ ಬೆಲೆಗಳನ್ನೂ ಹೆಚ್ಚಿಸಿದ್ದೀರಿ. ಕಾನೂನು, ಸಂವಿಧಾನದಲ್ಲಿ ಇಲ್ಲದ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡುವ ಮಸೂದೆ ಮಂಜೂರು ಮಾಡಿಕೊಂಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದು ಊರ್ಜಿತ ಆಗುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಒಂದು ಕಡೆ ಕೊಟ್ಟಂತಿರಬೇಕು. ಆದರೆ, ಅದು ಕೈ ಸೇರಬಾರದು. ಇದು ನಿಮ್ಮ ದುರುದ್ದೇಶ ಎಂದು ಟೀಕಿಸಿದರು.
ದಲಿತರನ್ನು ನಿರಂತರ ವಂಚಿಸುತ್ತ ಬಂದ ಸರಕಾರ, ಇದೀಗ ಅಲ್ಪಸಂಖ್ಯಾತರನ್ನೂ ವಂಚಿಸಲು ಮುಂದಾಗಿದೆ. ದಲಿತರಿಗೆ ಮೀಸಲಿಟ್ಟ 39 ಸಾವಿರ ಕೋಟಿ ಆ ಜನಾಂಗಗಳಿಗೆ ತಲುಪದಂತೆ ಮಾಡಿದ್ದೀರಿ. ಈಗ ಅಲ್ಪಸಂಖ್ಯಾತರನ್ನೂ ವಂಚಿಸಲು ಹೊರಟಿದ್ದೀರಿ ಎಂದು ಆರೋಪಿಸಿದರು.