ಬೆಂಗಳೂರು: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಘಟಕದಿಂದ ಬೆಂಗಳೂರಿನ ಬಸವನಗುಡಿಯ ಚಿಕ್ಕಣ್ಣ ಗಾರ್ಡನ್ ಹತ್ತಿರದ ಗಾಯನ ಸಮಾಜ ಆಡಿಟೋರಿಯಂನಲ್ಲಿ ಡಿ.7 ರಂದು “ವಿಪ್ರೋತ್ಸವ-2024” ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಸೋಮಯಾಜಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬ್ರಾಹ್ಮಣ ಸಮಾಜದ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿಗಳು ಹಾಗೂ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸವಾಲುಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಬೆಂಗಳೂರಿನಲ್ಲಿ “ವಿಪ್ರೋತ್ಸವ-2024” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಜನೆ, ದಾಸವಾಣಿ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ದಿನವಿಡಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ಡಾ.ಗೋವಿಂದ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ರವಿ ಸುಬ್ರಮಣ್ಯ, ಉದಯ ಗರುಡಾಚಾರ್, ರಾಮಮೂರ್ತಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆಸಗೋಡು ಜಯಸಿಂಹ, ಬ್ರಾಹ್ಮಣ ಸಮಾಜದ ಪ್ರಮುಖರಾದ ಗಿರೀಶ್ ನೀಲಗುಂದ, ಡಾ.ಸುಬ್ರಹ್ಮಣ್ಯ ಶರ್ಮಾ, ಟಿ.ರಾಮಾಚಾರಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
“ವಿಪ್ರೋತ್ಸವ-2024” ಕಾರ್ಯಕ್ರಮದಲ್ಲಿ ಸಮಾಜ ಏಳು ಸಾಧಕರಿಗೆ “ಭಾರ್ಗವ ಭೂಷಣ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಹಿರಿಯ ಪತ್ರಕರ್ತರಾ ರವಿ ಹೆಗಡೆ, ಚಲನಚಿತ್ರರಂಗದ ಹೆಸರಾಂತ ನಟ ಶ್ರೀಧರ್, ಪ್ರಮುಖರಾದ ಬಾಬು ಕೃಷ್ಣಮೂರ್ತಿ, ಡಾ.ಸುಧೀರ್ ಹೆಗಡೆ, ಪಂಡಿತ್ ಸತ್ಯಧ್ಯಾನ ಆಚಾರ್ಯ ಕಟ್ಟಿ, ಡಾ.ಶೈಲೇಂದ್ರ ಶರ್ಮಾ, ಡಾ ಬಿ.ಎಸ್.ಶ್ರೀನಾಥ್ ಅವರಿಗೆ “ಭಾರ್ಗವ ಭೂಷಣ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾರ್ತೀಕ್ ಸೋಮಯಾಜಿ ತಿಳಿಸಿದರು.