ಕಾರ್ತೀಕ ಮಾಸ ಹಿಂದೂಗಳಿಗೆ ಪ್ರಮುಖ ಮಾಸ.ವಿಶೇಷವಾಗಿ ಶಿವನ ಪೂಜೆಗೆ ಮೀಸಲಾದ ಮಾಸ. ಈ ಮಾಸದಲ್ಲಿ ಕಾರ್ತೀಕ ಸೋಮವಾರ ವಿಶೇಷ ಆಚರಣೆ ಇರುತ್ತದೆ.ಕಾರ್ತೀಕ ಸೋಮವಾರದಿಂದ ಸೋಲಾಹ ಸೋಮವಾರದ ವ್ರತ ಹಿಡಿಯುವವರು ಇರುತ್ತಾರೆ.
ಕಾರ್ತೀಕ ಸೋಮವಾರ ದಿನ ಪೂರಾ ಉಪವಾಸ ಇದ್ದು, ಸಂಜೆ ಸ್ನಾನ ಮಾಡಿ, ಮಡಿ ವಸ್ತ್ರ ಧರಿಸಿ ಶಿವನಿಗೆ ರುದ್ರಾಭಿಷೇಕ ಮಾಡಿ ತಂಬಿಟ್ಟು, ಕೋಸಂಬರಿ, ಗೊಜ್ಜವಲಕ್ಕಿ ಪಾನಕ ತಯಾರಿಸಿ ದೇವರಿಗೆ ನೈವೇದ್ಯ ಮಾಡುವರು.ನಂತರ ಶಿವನ ದೇವಾಲಯಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗಿ ಆಹಾರ ಸೇವಿಸುತ್ತಾರೆ.
ಮಿಕ್ಕಂತೆ ಕಾರ್ತೀಕ ಅಮಾವಾಸ್ಯೆ ದಿನ ಪುರೋಹಿತರನ್ನು ಕರೆದು ಅರಳಿ ಮರದ ಪೂಜೆ ಮಾಡಿ, ಎಳ್ಳು ಸುಸುಳು ನೈವೇದ್ಯ ಮಾಡಿ, ಎಳ್ಳು ದೀಪ ಹಚ್ಚಿ ಅರಳಿ ಮರಕ್ಕೆ ಪ್ರದಕ್ಷಿಣೆ ಮಾಡಿ ಮನೆಗೆ ಹಿಂದಿರುಗುತ್ತಾರೆ.
ಕಾರ್ತೀಕ ಸೋಮವಾರ ಪೂಜೆಗೆ ತಿಲಾಕ್ಷತೆ ಮಾಡುತ್ತಿದ್ದರು.ಅಂದರೆ ಭತ್ತದಿಂದ ಅಕ್ಕಿ ಬೇರ್ಪಡಿಸಿ, ಅದ್ರ ಜೊತೆಗೆ ಕರಿ ಎಳ್ಳು ಸೇರಿಸಿ ತಿಲಾಕ್ಷತೆ ಮಾಡುವರು.
: ಇದಲ್ಲದೆ ಕಾರ್ತೀಕ ಮಾಸ ಪೂರ್ತಿ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಪೂಜೆ ಇರುತ್ತದೆ.ಆಗ ಪ್ರತಿದಿನ ಒಂದು ಕುಟುಂಬದವರು ದೇವರಿಗೆ ಮಂಗಳಾರತಿ ಇಟ್ಟುಕೊಳ್ಳುತ್ತಾರೆ.ಅಂದರೆ ಆ ದಿನ ಬೆಳಿಗ್ಗೆ ಪೂಜೆಗೆ ದೇವಾಲಯದಲ್ಲಿ ವ್ಯವಸ್ಥೆ ಮಾಡಿ ಸಂಜೆ ದೇವರಿಗೆ ಮಂಗಳಾರತಿ ಇಟ್ಟುಕೊಳ್ಳುತ್ತಾರೆ.ಆಗ ತಮ್ಮ ನೆರೆಹೊರೆಯವರನ್ನು ದೇವಾಲಯಕ್ಕೆ ಕರೆಯುತ್ತಾರೆ.ದೇವಾಲಯದಲ್ಲಿ ಮುತ್ತೈದೆಯರಿಗೆ ಅರಿಶಿಣ,ಕುಂಕುಮ, ತಾಂಬೂಲ ಹಾಗು ಎಲ್ಲರಿಗೂ ಏನಾದರೂ ಚರ್ಪು,( ತಿಂಡಿ ) ಹಂಚಿ,ಬ್ರಾಹ್ಮನರಿಗೆ ಸಂಭಾವನೆ ನೀಡುವರು. ಈ ದಿನ ಅಷ್ಟಾವಧಾನ ಸೇವೆ ಇರುತ್ತದೆ.ನಂತರ ಕಡೆಯಲ್ಲಿ ದೇವಾಲಯದ ತುಂಬಾ ಸೇವಾಕರ್ಥರು ದೀಪ ಹಚ್ಚುತ್ತಾರೆ.ಇವರ ಜೊತೆ ಮಿಕ್ಕವರು ಸೇರುತ್ತಾರೆ.
ಮಡಿ ಹೆಂಗಸರು( ವಿಧವೆಯರು ) ಸಾಮಾನ್ಯವಾಗಿ ಸಂಜೆ ಪೂಜೆ ಮಾಡುವರು
ಹೀಗೆ ಕಾರ್ತೀಕ ಮಾಸದ ತುಂಬಾ ಕಾರ್ಯಕ್ರಮ ಇರುತ್ತದೆ.ಕಡೆಗೆ ಕಾರ್ತೀಕ ಅಮಾವಾಸ್ಯೆ ದೀಪೋತ್ಸವ ಎಲ್ಲ ದೇವಸ್ಥಾನ ಗಳಲ್ಲೂ ನಡೆಯುತ್ತದೆ.ಕಾರ್ತೀಕ ಹುಣ್ಣಿಮೆ ಕೃತಿಕ್ಕೋತ್ಸವ ಎಂದು ಮಾಡುವರು. ಈ ದಿನ ಸುಬ್ರಹ್ಮಣ್ಯ ಹಾಗು ಪಾರ್ವತಿ ದೇವಿಯ ಆರಾಧನೆಗೆ ಪ್ರಶಸ್ತ ವಾದುದು.
ವೈಚಾರಿಕವಾಗಿ ನೋಡಿದರೆ ಇದು ಒಂದು ಪಂಗಡದ ಆಚರಣೆ ಅಲ್ಲದೆ ನೆರೆಹೊರೆ ಹಾಗು ನೆಂಟರೊಡನೆ ಬೆರೆಯುವ ಆಚರಣೆ.ಇಂತಹ ಆಚರಣೆಗಳಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯ.ಸಾಮಾಜಿಕ ಸಂಬಂಧಗಳು ಸುಲಭ ಆಗುತ್ತವೆ.ಉಳಿದಂತೆ ಪೂಜೆ ಪುನಸ್ಕಾರಗಳಿಂದ ನಮ್ಮ ಮನಸ್ಸಿಗೂ ನೆಮ್ಮದಿ.
ಈ ಲೇಖನ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ. ಇದು ಪದ್ಧತಿ ಇರುವವರ ಮನೆಯ ಆಚರಣೆ.ಉಳಿದ ಜಾತಿಯವರು ತಮ್ಮ ಪದ್ಧತಿಯಂತೆ ಕಾರ್ತೀಕ ಮಾಸಾಚರನೆ ಮಾಡುವರು
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com