Live Stream

[ytplayer id=’22727′]

| Latest Version 8.0.1 |

State News

ಮದುವೆ ಎನ್ನುವುದು ಪವಿತ್ರ ಬಂಧನ – ವಿಚ್ಛೇದನಕ್ಕೆ ಎಳಸಬೇಡಿ: ನ್ಯಾಯಮೂರ್ತಿ ಶ್ರೀಶಾನಂದ ಕರೆ

ಮದುವೆ ಎನ್ನುವುದು ಪವಿತ್ರ ಬಂಧನ – ವಿಚ್ಛೇದನಕ್ಕೆ ಎಳಸಬೇಡಿ: ನ್ಯಾಯಮೂರ್ತಿ ಶ್ರೀಶಾನಂದ ಕರೆ

ಬೆಂಗಳೂರು, ಮಾರ್ಚ್‌, 15, 2026: ಮದುವೆ ಎನ್ನುವುದು ಪವಿತ್ರವಾದ ಬಂಧ. ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ಸಮಯದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿಸಬೇಕು. ಹೊಸದಾಗಿ ಮದುವೆ ಆದವರು ವಿಚ್ಛೇದನಕ್ಕೆ ಎಳಸದೇ ಸಂಯಮದಿಂದ ಜೀವನ ಸಾಗಿಸಬೇಕು. ಯಾವುದೇ ಕಲಹ ಮಾಡಿಕೊಳ್ಳದೇ, ನ್ಯಾಯಾಲಯದ ಕಟಕಟೆವರೆಗೆ ಬರದೇ ಸಮಾಧಾನ ಮತ್ತು ಸುಖಃ ಚಿತ್ತರಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಅವರು ಸಲಹೆ ನೀಡಿದರು.
ಇಲ್ಲಿನ ಕೆ.ಆರ್.ರಸ್ತೆಯ ನೆಟ್ಟಕಲ್ಲಪ್ಪ ವೃತ್ತದ ಬಸವನಗುಡಿಯ ದ್ವಾರಕಾನಾಥ ಭವನದಲ್ಲಿ ಅಕ್ಷಯ ವಿಪ್ರ ಮಹಾಸಭಾದ ವತಿಯಿಂದ ತ್ರಿಮಸ್ಥ ಬ್ರಾಹ್ಮಣರಿಗಾಗಿ ಭಾನುವಾರ ನಡೆದ ವಧು-ವರಾನ್ವೇಷಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಉತ್ತಮವಾದ ವರ ಸಿಗುತ್ತಾ? ಎನ್ನುವ ಪ್ರಶ್ನೆ ಇತ್ತು. ಈಗ ಪರಿಸ್ಥಿತಿ ಬದಲಾವಣೆಗೊಂಡು ಒಳ್ಳೆಯ ಹುಡುಗಿ ಸಿಗುತ್ತಾಳಾ? ಎನ್ನುವ ವಿಚಾರ ಮಾಡುವಂತಾಗಿದೆ. ಗಂಡು-ಗಂಡನಾಗಲು, ಹೆಣ್ಣು-ಹೆಂಡತಿಯಾಗಲು ಧರ್ಮದ ತಳಹದಿಯಲ್ಲಿ ನೆರವೇರಿಸುವ ಶಾಸ್ತ್ರಬದ್ಧ ಕಾರ್ಯಕ್ರಮವೇ ವಿವಾಹ ಎಂದೆನಿಸಿಕೊಳ್ಳುತ್ತದೆ ಎಂದರು.
ಮದುವೆ ಎನ್ನುವುದು ಸಂಸ್ಕೃತಿ, ಪರಂಪರೆಯ ತಳಹದಿಯಲ್ಲಿ ನೆರವೇರಿಸಬೇಕು. ಆಗ ಮಾತ್ರ ನ್ಯಾಯಾಲಯ ಪುರಸ್ಕರಿಸುತ್ತದೆ. ಪರಸ್ಪರ ಒಪ್ಪಂದದಂತೆ ಮದುವೆ ಆಗಿ, ಮಕ್ಕಳು ಆದ ಬಳಿಕ ನ್ಯಾಯಾಲಯಕ್ಕೆ ಬಂದರೆ ತೊಂದರೆ ಆಗುತ್ತದೆ. ಅನ್ಯ ಧರ್ಮದಲ್ಲಿ ಮದುವೆ ಎನ್ನುವುದು ಗುತ್ತಿಗೆ ಇದ್ದ ಹಾಗೆ. ಹಿಂದೂ ಧರ್ಮದಲ್ಲಿ ಹಾಗಲ್ಲ. ಕನ್ಯೆ ನೋಡುವುದು, ಪಾಣಿಗ್ರಹಣ ಮತ್ತು ಸಪ್ತಪದಿಯ ಮೂಲಕ ಮದುವೆ ಸಂಪ್ರದಾಯಬದ್ಧವಾಗಿ ಸಂಪನ್ನಗೊಳಿಸಬೇಕು. ಮದುವೆಯಲ್ಲಿ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಅಸುರ, ಗಂಧರ್ವ ಮತ್ತು ರಾಕ್ಷಸ ಎಂಟು ಬಗೆಯ ವಿಧಗಳಿವೆ. ಇದರರ್ಥ ಒಂದು ಅರೇಂಜ್ ಇನ್ನೊಂದು ಲವ್ ಮ್ಯಾರೇಜ್ ಅಂತ. ಮದುವೆಗೆ ಮುಂಚೆ ಹುಡುಗ-ಹುಡುಗಿ ದೈಹಿಕ ಸಂಬಂಧ ಬೆಳೆಸಿಕೊಂಡರೆ ಅದು ರಾಕ್ಷಸ ವಿವಾಹವಾಗುತ್ತದೆ. ಮದುವೆ ಆಗದೇ ಇರುವವರಿಗೆ ಹಿಂಸೆ, ಸಾಮಾಜಿಕ ತುಮುಲಗಳು ಏರ್ಪಡುತ್ತವೆ. ಹೀಗಾಗಿ ಪೋಷಕರು ನೋಡುವ ಕನ್ಯೆ ಅಥವಾ ವರನನ್ನು ಒಪ್ಪಿಕೊಂಡು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಕೆಲ ಪಟ್ಟಭದ್ರರು ಹೆಣ್ಣು-ಗಂಡು ಜೋಡಿ ಮಾಡುವರಿಗೆ ಮದುವೆ ಬ್ರೋಕರ್ ಗಳೆಂದು ಕರೆಯುತ್ತಾರೆ. ಹಾಗೆ ಕರೆಯುವುದು ತಪ್ಪು. ನವ ಜೋಡಿಗಳೊಂದಿಗೆ ಎರಡು ಕುಟುಂಬಗಳನ್ನು ಬೆಸೆಯುವ ಕೆಲಸವನ್ನು ಅವರು ಮಾಡಿರುತ್ತಾರೆ. ಹೀಗಾಗಿ ಬ್ರೋಕರ್ ಎನ್ನುವ ಪದ ಸಲ್ಲದು ಎಂದು ಕಿವಿಮಾತು ಹೇಳಿದರು. ಇಂದು ತ್ರಿಮತಸ್ಥ ಬ್ರಾಹ್ಮಣರಿಗಾಗಿ ನಡೆಯುತ್ತಿರುವ ವಧು-ವರಾನ್ವೇಷಣ ಸಮಾರಂಭದಲ್ಲಿ ಎಲ್ಲರೂ ತಾಂತ್ರಿಕ ವ್ಯವಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಅರ್ಹ ವಧು-ವರರು ವೆಬ್‌ಸೈಟ್ ನಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ದಾಖಲಿಸಿ ಒಪ್ಪಿತವಾಗಿ, ವಿವಾಹ ಮಾಡಿಕೊಳ್ಳಿ. ಮದುವೆ ಆಗದವರು `ಗಿರಿಜಾ ಕಲ್ಯಾಣ ಅಥವಾ ಪದ್ಮಾವತಿ ಕಲ್ಯಾಣ’ ದಂತಹ ಪರಮ ಪವಿತ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದ ನೆರವು ನೀಡಬೇಕು. ಮುಂದಿನ ಕಲ್ಯಾಣ ಪರ್ವದೊಳಗೆ ನಿಮ್ಮ ವಿವಾಹವಾಗುವುದು ನಿಶ್ಚಿತವೆಂದು ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು.
ವಿಪ್ರ ಮಹಾಸಭಾದ ಅಧ್ಯಕ್ಷ ಎನ್.ಕೆ.ರಾಮಚಂದ್ರರಾವ್ ಮಾತನಾಡಿ, ವಧು-ವರ ಅನ್ವೇಷಣಾ ಸಮಾರಂಭ ಯಶಸ್ಸಿಗಾಗಿ `ಪಾರ್ವತಿ ಸ್ವಯಂವರ’ ಏರ್ಪಡಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ಅಯೋಜಿಸಿರುವ ಈ ಸಮಾರಂಭದಲ್ಲಿ ನೂತನವಾಗಿ ಜೋಡಿಯಾಗುವವರಿಗೆ ಶುಭವಾಗಲಿ. ಅಕ್ಷಯ ವಿಪ್ರ ಮಹಾಸಭಾದಲ್ಲಿ 2500ಕ್ಕೂ ಹೆಚ್ಚು ಸದಸ್ಯರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವಸತಿ ನಿಲಯ, ಆರೋಗ್ಯ ಸೌಲಭ್ಯಕ್ಕಾಗಿ ವೈದ್ಯಕೀಯ ಸೇವೆ, ವಧು-ವರರ ಸಮಾವೇಶ, ಸಾಮೂಹಿಕ ಉಪನಯನ ಹೀಗೆ ಹತ್ತು ಹಲವಾರು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಆರಂಭದಲ್ಲಿ ವಿಪ್ರವರೇಣ್ಯರಿಂದ `ಗಿರಿಜಾ ಕಲ್ಯಾಣ’ ಮತ್ತು `ಪದ್ಮಾವತಿ ಕಲ್ಯಾಣ’ ಮಹೋತ್ಸವಗಳನ್ನು ನೆರವೇರಿಸಲಾಯಿತು. ಸಂಪ್ರದಾಯದಂತೆ ಗೋತ್ರ ಪ್ರವರ ಹೇಳಿ, ವಾಙ್ಮಯ ನಿಶ್ಚಯ, ತಾಂಬೂಲ, ಮಂಗಳ ದ್ರವ್ಯಗಳನ್ನು ನೀಡಿ ಹಾರ-ತುರಾಯಿಗಳನ್ನು ವಧು-ವರರ ಕಡೆಯವರಿಗೆ ವಿನಿಮಯಗೊಳಿಸಲಾಯಿತು. ಯಾಗಶಾಲೆಯ ಸಾಕ್ಷಿಯಾಗಿ ನಾದಸ್ವರ ಹಾಗೂ ಸಕಲ ಮಂಗಳಕರ ವಾದ್ಯಗಳೊಂದಿಗೆ ಅದ್ದೂರಿಯಾಗಿ `ದೈವೀಕವಾದ ಕಲ್ಯಾಣ ಮಹೋತ್ಸವ’ ನೆರವೇರಿಸಲಾಯಿತು.
ಇಡೀ ದಿನ ನಡೆದ ಈ ಸಮಾರಂಭದಲ್ಲಿ ವೇದಿಕೆಯ ಮೇಲಿದ್ದ ಉದ್ಘೋಷಕರು ನೂತನ ವಧು-ವರರ ಪೋಷಕರಿಗೆ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನು ನೀಡಿದರು. ಸ್ಥಳದಲ್ಲಿ ಪುರೋಹಿತ ವರ್ಗದವರು ಇದ್ದು ಜಾತಕಗಳನ್ನು ಪರಿಶೀಲಿಸಿದರು. ಆನ್ ಲೈನ್ ನಲ್ಲಿ ವೆಬ್ ಸೈಟ್ ಮೂಲಕ ನೋಂದಣಿ ಪ್ರಕ್ರಿಯೆಗೆ ಹಲವಾರು ಕೌಂಟರ್ ಗಳನ್ನು ತೆರೆಯಲಾಗಿತ್ತು. ಕರ್ನಾಟಕದ ಹಲವು ಜಿಲ್ಲೆಗಳಿಂದ ಕನ್ಯೆ-ವರರೊಂದಿಗೆ ಆಗಮಿಸಿದ ಪೋಷಕರಿಗೆ ಕ್ಷಣ ಕ್ಷಣದ ಮಾಹಿತಿ ಒದಗಿಸಲು ವೇದಿಕೆಯ ಮುಂಭಾಗದಲ್ಲಿ ಬೃಹತ್ ಸ್ಕ್ರೀನ್ ಗಳನ್ನು ಅಳವಡಿಸಲಾಗಿತ್ತು. ಶ್ರವಣ ನಕ್ಷತ್ರದಂದು ನಡೆದ ಈ ಸಮಾರಂಭಕ್ಕೆ ಆಗಮಿಸಿದ್ದ ಪೋಷಕರು ಮತ್ತು ವಧು-ವರರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಅಕ್ಷಯ ವಿಪ್ರ ಮಹಾಸಭಾದ ಗೌರವ ಅಧ್ಯಕ್ಷ ಆಡಿ. ಕೀರ್ತಿ ರಾಜ್ ಎನ್., ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಕಾರ್ಯದರ್ಶಿ ಎನ್. ಎಸ್. ಸುಧೀಂದ್ರ ರಾವ್ ಅವರು ಉಪಸ್ಥಿತರಿದ್ದರು. ಸಂಘದ ನೂತನ ವೆಬ್ ಸೈಟ್ ಅನ್ನು ಶಾಸಕ ರವಿಸುಬ್ರಮಣ್ಯ ಅವರ ಧರ್ಮ ಪತ್ನಿ ಮಂಜುಳಾ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ ರಾವ್, ಉಪಾಧ್ಯಕ್ಷರಾಧಾ ಡಾ, ರಘುನಾಥ್, ಆನಂದರಾವ್, ಡಾ, ಕಿರಣ್. ಎಸ್ ಮೂರ್ತಿ, ಲಕ್ಷ್ಮೀಶ, ಶ್ರೀಪ್ರಕಾಶ್, ಜಂಟಿ ಕಾರ್ಯದರ್ಶಿ ಟಿ ಎನ್ ಶಾಂತಕುಮಾರ್, ಮಹೇಶ ಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಸಮಾಜ ಸೇವಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಂದ್ಯಾ ಭಟ್ ನಿರೂಪಿಸಿದರು ಇವರಿಗೆ ಶುಭ ಪ್ರಹ್ಲಾದ, ಕಲ್ಪನಾ ಅವರು ಜತೆಯದರು.
—-

ವೀ ಕೇ ನ್ಯೂಸ್
";